Advertisement

ಆರ್ಟ್‌ ವಾಲ್‌ ಆಫ್ ರಘುರಾಜಪುರ

09:55 PM Jun 12, 2019 | mahesh |

ಈ ಊರಿನ ಮನೆಗಳ ಮೇಲೆ ಬಣ್ಣ ಬಣ್ಣದ ಚಿತ್ತಾರ! ಇಲ್ಲಿನ ಮನೆಗಳೆೆಲ್ಲಾ ಸುಂದರವಾದ ಕಲಾಕೃತಿಗಳಾಗಿ ಕಂಗೊಳಿಸುತ್ತವೆ. ಈ ಗ್ರಾಮದ ತುಂಬೆಲ್ಲಾ ಕಲಾವಿದರ ದಂಡೇ ಕಂಡು ಬರುತ್ತದೆ.

Advertisement

ಪುರಾಣ ಚಿತ್ರಗಳು
ನಾವು ಒರಿಸ್ಸಾ ರಾಜ್ಯದ ಪುರಿಯಿಂದ ಕೇವಲ ಹತ್ತು ಕಿಲೋಮೀಟರ್‌ ದೂರದಲ್ಲಿರುವ ರಘುರಾಜಪುರದಲ್ಲಿ ನೋಡಬಹುದು. ಇದು ಕುಗ್ರಾಮವಾದರೂ ಸಹ ಕಲಾಗ್ರಾಮವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಊರಿನಲ್ಲಿ ಸುಮಾರು 120 ಮನೆಗಳಿವೆ. ಎಲ್ಲಾ ಮನೆಗಳ ಹೊರಗೂ ಒಳಗೂ ಸಹ ಸುಂದರ ಕೈಬರಹದ ಚಿತ್ರಕಲೆಗಳು ಎಲ್ಲರ ಗಮನ ಸೆಳೆಯುತ್ತವೆ. ಎಲ್ಲಾ ಮನೆಗಳಲ್ಲಿಯೂ ಚಿತ್ರಗಳು ರೂಪುಗೊಳ್ಳುತ್ತಿರುತ್ತವೆ. ಪಟಚಿತ್ರ ಇಲ್ಲಿನ ಪ್ರಮುಖಕಲೆಯಾಗಿದೆ. ಪ್ರತಿ ಮನೆಯ ಗೋಡೆಗಳು ಮಹಾಭಾರತ ಮತ್ತು ರಾಮಾಯಣದ ಕಥೆಗಳನ್ನು ಚಿತ್ರಗಳ ಮೂಲಕ ಸಾರಿ ಹೇಳುತ್ತವೆ!

ಪ್ರತಿಯೊಬ್ಬರೂ ಚಿತ್ರಕಲಾವಿದರು!
ಇಲ್ಲಿರುವ ನೂರಕ್ಕೂ ಹೆಚ್ಚು ಕುಟುಂಬದವರು ಹಳ್ಳಿಯ ಎರಡು ಬೀದಿಗಳಲ್ಲಿರುವ ಮನೆಗಳನ್ನೇ ತಮ್ಮ ಚಿತ್ರಕಲೆಯನ್ನು ಪ್ರದರ್ಶಿಸುವ ಅಂಗಡಿಯನ್ನಾಗಿ ಪರಿವರ್ತಿಸಿಕೊಂಡಿರುವುದು ಇಲ್ಲಿನ ವಿಶೇಷ. ಊರಿನ ಗಂಡಸರು, ಮಹಿಳೆಯರು ಮತ್ತು ಮಕ್ಕಳೂ ಸಹ ಚಿತ್ರಕಲೆಯನ್ನು ಕರಗತಮಾಡಿಕೊಂಡಿದ್ದಾರೆ. ಇವರು ಕಾಗದ, ಮನೆಯ ಗೋಡೆ, ಮರ, ಕೊಬ್ಬರಿ, ಇಸ್ಪಿಟ್‌ ಎಲೆ, ಖಾಲಿ ಶೀಷೆ, ಮರದ ಎಲೆ, ಬಟ್ಟೆ… ಹೀಗೆ ಸಿಕ್ಕ ಸಿಕ್ಕ ವಸ್ತುಗಳ ಮೇಲೆಲ್ಲಾ ಕಲೆಯನ್ನು ಅರಳಿಸಿದ್ದಾರೆ. ಹೀಗಾಗಿ ಇಲ್ಲಿ ಪ್ರತಿಯೊಬ್ಬರೂ ಚಿತ್ರಕಲಾವಿದರು.

“ಪಾರಂಪರಿಕ ಹಳ್ಳಿ’ ಬಿರುದು
ಪ್ರತಿ ಮನೆಗಳೂ ಸಹ ಚಿತ್ರಪಟಗಳ ಗ್ಯಾಲರಿಯಾಗಿ ಕಂಗೊಳಿಸುತ್ತವೆ. 2000ನೇ ಇಸವಿಯಲ್ಲಿ ಈ ಹಳ್ಳಿಯನ್ನು ಗುರುತಿಸಿದ ಸರ್ಕಾರ ಇದನ್ನು ದೇಶದ ಮೊದಲ ಪಾರಂಪರಿಕ ಹಳ್ಳಿ ಎಂದು ಕರೆದು ಇದನ್ನು ಕಲಾಗ್ರಾಮವನ್ನಾಗಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಿ, ಯಶ ಕಂಡಿದೆ. ಹಲವು ವರ್ಷಗಳ ಹಿಂದೆ ತುಂಬಾ ಸಂಕಷ್ಟದ ಸಮಯದಲ್ಲಿ ಇಲ್ಲಿನ ಜನರೆಲ್ಲಾ ಕಲೆಯನ್ನು ಕೈ ಬಿಟ್ಟು ವ್ಯವಸಾಯ ಮಾಡಲು ನಿರ್ಧರಿಸಿ, ಸ್ವಲ್ಪ ಕಾಲ ಕೃಷಿಗೆ ಮೊರೆ ಹೋಗಿದ್ದರು. ಆದರೆ ಅವರ ಪ್ರಯತ್ನ ಫ‌ಲ ನೀಡಲಿಲ್ಲ. ಹೀಗಾಗಿ ಮತ್ತೆ ಅವರೆಲ್ಲರೂ ಕಲೆಯನ್ನೇ ಕೈ ಹಿಡಿದರು.

– ದಂಡಿನಶಿವರ ಮಂಜುನಾಥ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next