ವಿಟ್ಲ : ಭಗವಂತನ ಸೇವೆ ಮತ್ತು ಕಲಾ ಸೇವೆ ಮನಸ್ಸಿಗೆ ಮುದ ನೀಡುತ್ತದೆ. ಯಕ್ಷಗಾನ ಪ್ರದರ್ಶನದ ಮೂಲಕ ಭಗವಂತ ಸಂಪ್ರೀತನಾಗುತ್ತಾನೆ. ದೇವರು ಮೆಚ್ಚುವ ಕಲೆಯನ್ನು ಆಸ್ವಾದಿಸುವ ಪ್ರತಿಯೊಬ್ಬರೂ ಸಹ ಸಾತ್ವಿಕರಾಗಿ ಪರಿವರ್ತನೆ ಹೊಂದಲು ಸಾಧ್ಯ ಎಂದು ಕಾಸರಗೋಡು ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ನುಡಿದರು.
ಅವರು ಶನಿವಾರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷೋತ್ಸವ ಸಮಿತಿ ವಿಟ್ಲ ವತಿಯಿಂದ ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿಯವರಿಂದ ನಡೆದ ಯಕ್ಷೋತ್ಸವದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ಯಕ್ಷಗಾನವು ಸಂಸ್ಕೃತಿಗೆ ಅನನ್ಯ ಕೊಡುಗೆ ನೀಡಿದೆ. ಯಕ್ಷಗಾನ ಕಲೆ ಉಳಿದು ಬೆಳೆಯುವುದಕ್ಕೆ ಯಕ್ಷೊàತ್ಸವಗಳ ಆವಶ್ಯಕತೆಯಿದೆ ಎಂದು ತಿಳಿಸಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಗೌಡ ಚಿಲ್ತಡ್ಕ ಮಾತನಾಡಿ ಮಾನವೀಯ ಮೌಲ್ಯಗಳು ವರ್ಧಿಸಲು ಯಕ್ಷಗಾನ ಕಲೆ ಪೂರಕವಾಗಿದೆ ಎಂದರು.
ವಿಟ್ಲ ಅರಮನೆಯ ಜನಾರ್ದನ ವರ್ಮ ಅರಸರು ಅಧ್ಯಕ್ಷತೆ ವಹಿಸಿದ್ದರು. ಯಕ್ಷೋತ್ಸವ ಸಮಿತಿ ಗೌರವಾಧ್ಯಕ್ಷ ಎಂ.ಎನ್.ದಿನಕರ ಭಟ್ ಮಾವೆ ಮಾತನಾಡಿದರು. ಇದೇ ಸಂದರ್ಭ ಯಕ್ಷೊàತ್ಸವಕ್ಕೆ ಸಹಕರಿಸಿದವರನ್ನು, ಎಡನೀರು ಶ್ರೀ ಅವರನ್ನು ಮಠದ ವತಿಯಿಂದ ಗೌರವಿಸಲಾಯಿತು.
ಯಕ್ಷೋತ್ಸವ ಸಮಿತಿ ಸಂಚಾಲಕ ಕೈಯೂರು ನಾರಾಯಣ ಭಟ್ ಸ್ವಾಗತಿಸಿದರು. ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ದಂಬೆಕಾನ ವಂದಿಸಿದರು. ಡಾ| ಬಿ.ಎನ್. ಮಹಾಲಿಂಗ ಭಟ್ ಕಾರ್ಯಕ್ರಮ ನಿರೂಪಿಸಿದರು.