ಬೆಂಗಳೂರಿನ ಮಹಾಲಕ್ಷ್ಮಿಪುರಂನ ಜ್ಯೋತಿ ಜಗನ್ನಾಥ ಶೆಟ್ಟಿ, ವೃತ್ತಿಯಲ್ಲಿ ಅಧ್ಯಾಪಕರು. ಪ್ರವೃತ್ತಿಯಲ್ಲಿ ಕರಕುಶಲ ಕಲಾವಿದೆ. ಬಿಡುವಿನ ವೇಳೆಯಲ್ಲಿ ಬಟ್ಟೆಯಲ್ಲಿ ಹೂಗಳನ್ನು ಅರಳಿಸಬಲ್ಲ ಚತುರೆ…
“ಉದ್ಯೋಗ, ಮನೆ, ಮಕ್ಕಳು ಅಂತ ಚೂರೂ ಪುರುಸೊತ್ತೇ ಸಿಗ್ತಾ ಇಲ್ಲ. ಮದುವೆಗೂ ಮುಂಚೆ ಇದ್ದ ಹವ್ಯಾಸಗಳೆಲ್ಲ ಈಗ ಮರೆತೇಹೋಗಿವೆ’ ಎಂದು ಬೇಸರಿಸಿ, ಸಪ್ಪೆ ಮೋರೆ ಮಾಡಿಕೊಳ್ಳುವವರು ಇದ್ದಾರೆ. ಕಸೂತಿ ಕಲೆ, ಹೂ ಕಟ್ಟೋದು, ರಂಗೋಲಿ, ಹಾಡು, ಹಸೆ… ಇವೆಲ್ಲಾ ಮಹಿಳೆಯರಿಗೆ ಒಲಿದ ಕಲೆಗಳು. ಆದರೆ, ಜಂಜಾಟದ ಬದುಕಿನಲ್ಲಿ ಇವೆಲ್ಲದಕ್ಕೆ ಸಮಯ ಎತ್ತಿಡಲು ಆಗುತ್ತಿಲ್ಲ ಎಂಬ ಕೊರಗು ಅನೇಕರದ್ದು. ಇಲ್ಲೊಬ್ಬರಿದ್ದಾರೆ, ಕೈ ತುಂಬಾ ಕೆಲಸದ ಮಧ್ಯೆಯೂ ತಮ್ಮ ಎದೆಯೊಳಗಿನ ಕಲೆಗೆ ನೀರೆರೆದು ಪೋಷಿಸಿಕೊಂಡು ಬಂದಿದ್ದಾರೆ.
ಬೆಂಗಳೂರಿನ ಮಹಾಲಕ್ಷ್ಮಿಪುರಂನ ಜ್ಯೋತಿ ಜಗನ್ನಾಥ ಶೆಟ್ಟಿ, ವೃತ್ತಿಯಲ್ಲಿ ಅಧ್ಯಾಪಕರು. ಪ್ರವೃತ್ತಿಯಲ್ಲಿ ಕರಕುಶಲ ಕಲಾವಿದೆ. ಬಿಡುವಿನ ವೇಳೆಯಲ್ಲಿ ಬಟ್ಟೆಯಲ್ಲಿ ಹೂಗಳನ್ನು ಅರಳಿಸಬಲ್ಲ ಚತುರೆ. ಸೋಲೋ ವುಡ್ ಫ್ಲವರ್, ದಾರದ ಆಭರಣಗಳು, ಹ್ಯಾಂಡ್ ಬ್ಯಾಂಕ್, ಹ್ಯಾಂಡ್ ಪರ್ಸ್, ಮದುವಣಗಿತ್ತಿಯ ಸಿಂಗಾರ ಸಾಧನಗಳು, ಅಲಂಕಾರಿಕ ಹೂಗಳು, ಟ್ರೇಯಲ್ಲಿ ಅಲಂಕಾರ, ಮ್ಯಾಟ್ ಮೇಕಿಂಗ್, ಬಾಗಿಲ ತೋರಣ, ಸೀರೆಯಲ್ಲಿ ಭಿನ್ನ ಬಗೆಯ ಅಲಂಕಾರಗಳು ಹೀಗೆ ದಿನೋಪಯೋಗಿ ವಸ್ತುಗಳಲ್ಲಿಯೇ ಕಲೆಯನ್ನು ಅರಳಿಸುತ್ತಾರೆ.
ಮೂಲತಃ ಶಿವಮೊಗ್ಗದ ಚಿಲುಮೆ ಜೆಡ್ಡು ಗ್ರಾಮದ ಜ್ಯೋತಿ, ಯಾವುದೇ ಕಲಾ ತರಗತಿಗೆ ಹೋದವರಲ್ಲ. ಬಾಲ್ಯದಿಂದಲೂ ಕಲಾಸಕ್ತಿ ಹೊಂದಿದ್ದ ಇವರಿಗೆ ತಾಯಿ ಹಾಗೂ ಶಿಕ್ಷಕಿಯರೇ ಪ್ರೇರಣೆ. ಅವರನ್ನು ನೋಡುತ್ತಲೇ ಚಿಕ್ಕಪುಟ್ಟ ಕಲಾಕೃತಿಗಳನ್ನು ಮಾಡುವುದನ್ನು ಕಲಿತರು. ನಂತರ ಸತತ ಅಭ್ಯಾಸದಿಂದ ಕಲೆಯನ್ನು ಕರಗತ ಮಾಡಿಕೊಂಡರು. ಮದುವೆಯ ನಂತರ ಪತಿ ಜಗನ್ನಾಥ್ ಮತ್ತು ಅತ್ತೆಯ ಪ್ರೋತ್ಸಾಹವೂ ಸಿಕ್ಕಿತು. ಇವರು ಅಂಧ ಮಕ್ಕಳಿಗೆ, ವಿಭಿನ್ನ ರೀತಿಯ ಕಲಾ ಪ್ರಕಾರಗಳ ತರಬೇತಿ ನೀಡಿ ಅವರ ಕೈಯಲ್ಲಿ ವಿಶಿಷ್ಟ ವಸ್ತುಗಳನ್ನು ಮಾಡಿಸಿದ್ದಾರೆ. ಅವರಿಂದ ಕರಕುಶಲ ಕಲೆಯ ಬಗ್ಗೆ ಮಾಹಿತಿ ಪಡೆಯಲು
805069333/8660264334 ಸಂಪರ್ಕಿಸಿ.
ಈ ಹವ್ಯಾಸವನ್ನು ನಾನು ತಾಯಿಯನ್ನು ನೋಡಿ ಕಲಿತದ್ದು. ನಂತರ ಶಾಲಾ ಶಿಕ್ಷಕಿಯರ, ಮದುವೆಯ ನಂತರ ಗಂಡ ಹಾಗೂ ಅತ್ತೆಯ ಬೆಂಬಲ ಸಿಕ್ಕಿದ್ದರಿಂದ, ಇಷ್ಟಪಟ್ಟ ಹವ್ಯಾಸವನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗಿದೆ.
– ಜ್ಯೋತಿ ಜಗನ್ನಾಥ ಶೆಟ್ಟಿ
ಬಳಕೂರು ವಿ.ಎಸ್.ನಾಯಕ, ಬೆಂಗಳೂರು