Advertisement

ಆಧುನಿಕತೆ ಅಬ್ಬರಕ್ಕೆ ಮಂಕಾದ ಮಣ್ಣಿನ ಹಣತೆ

06:55 PM Nov 02, 2021 | Team Udayavani |

ಕಾರ್ಕಳ: ದೀಪಗಳ ಹಬ್ಬದಲ್ಲಿ ಹಣತೆಗಳಿಗೆ ಪ್ರಾಧಾನ್ಯವಿದೆ. ಆದರೆ ಆಧುನಿಕತೆಯ ಬಿರುಗಾಳಿಗೆ ಸಿಲುಕಿ ಕುಂಬಾರರ ಮಣ್ಣಿನ ಹಣತೆ ಆರುತ್ತಿದ್ದು, ಅವರ ಬದುಕು ಕತ್ತಲಾಗುತ್ತಿದೆ. ಜೇಡಿ (ತೇವ) ಮಣ್ಣಿನಿಂದ ತಯಾರಿಸಿದ ಹಣತೆಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗಿರುವುದರಿಂದ ಕುಂಬಾರ ಜೀವನ ನಿರ್ವಹಣೆ ಕಷ್ಟವಾಗಿದೆ.

Advertisement

ದೂರದ ಸ್ಥಳಗಳಿಂದ ಜೇಡಿ ಮಣ್ಣು ತಂದು ಹದ ಮಾಡಿ ತಮ್ಮ ಕೈಚಳಕದಿಂದ ವಿವಿಧ ವಿನ್ಯಾಸದ ಹಣತೆಗಳನ್ನು ತಯಾರಿಸಿ, ಸುಟ್ಟು ಮಾರುಕಟ್ಟೆಗೆ ತಂದು 10ರಿಂದ 15 ರೂ.ಗಳಿಗೆ ಡಜನ್‌ ಹಣತೆ ಎಂದರೂ ಗ್ರಾಹಕರು ಖರೀದಿಸದ ಪರಿಸ್ಥಿತಿ ಬಂದಿರುವುದು ದುರದೃಷ್ಟಕರ ಸಂಗತಿ. ಹೊಳಪಿನ ಮೈಮಾಟವುಳ್ಳ, ವೈವಿಧ್ಯಮಯ ಕಲಾ ಚಿತ್ತಾರ ಹೊಂದಿರುವ ಪಿಂಗಾಣಿ ಹಣತೆ, ಕ್ಯಾಂಡಲ್‌ಗ‌ಳಿಗೆ ಬಹುತೇಕ ಜನರು ಮಾರುಹೋಗಿದ್ದೇ ಕುಂಬಾರರ ಈ ಗೋಳಿಗೆ ಕಾರಣ.

ದಶಕದ ಹಿಂದೆ ದೊಡ್ಡ ಪ್ರಮಾಣದಲ್ಲಿ ಹಣತೆಗಳನ್ನು ಮಾರಾಟ ಮಾಡುತ್ತಿದ್ದ ಕುಂಬಾರ ಕುಟುಂಬಗಳು ಇತ್ತೀಚಿನ ವರ್ಷಗಳಿಂದ ಸಾವಿರದೊಳಗಿನ ಲೆಕ್ಕದಲ್ಲಿ ಹಣತೆಗಳನ್ನು ಮಾರಾಟ ಮಾಡಿ ತಮ್ಮ ಬದುಕಿನ ಬಂಡಿ ಸಾಗಿಸುತ್ತಿವೆ. ಹಣತೆ ತಯಾರಿಸಿಯೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವರು ಈಗ ಬೇರೆ ವೃತ್ತಿಯತ್ತಲೂ ಮುಖ ಮಾಡಿದ್ದಾರೆ.

ಹಿಂದೆಲ್ಲ ಹಣತೆ ಮಾಡುವ ಕುಂಬಾರರ ಕುಟುಂಬಗಳಿಗೆ ದೀಪಾವಳಿ ಬಂತೆಂದರೆ ಅದೊಂದು ಅಕ್ಷರಶಃ ಅವರ ಬದುಕಿನ ಬೆಳಕಿನ ಹಬ್ಬವೇ ಆಗಿತ್ತು. ದೀಪಾವಳಿಗೆ ಎರಡು ತಿಂಗಳು ಮುಂಚೆಯೇ ಜೇಡಿ ಮಣ್ಣನ್ನು ತಂದು ಹದ ಮಾಡಿ ಮನೆಯೊಳಗೆ, ಅಂಗಳದಲ್ಲಿ ದೊಡ್ಡ ಸಂಖ್ಯೆಯಲ್ಲಿ ಹಣತೆಗಳನ್ನು ಮಾಡಿ ಬಿಸಿಲಿಗೆ ಒಣಗಲು ಇಡುತ್ತಿದ್ದರು. ಬಳಿಕ ಅದನ್ನು ಚೆನ್ನಾಗಿ ಸುಟ್ಟು ಮಾರುಕಟ್ಟೆಗೆ ತರುತ್ತಿದ್ದರು. ಗ್ರಾಹಕರಂತೂ ಒಬ್ಬೊಬ್ಬರು 30-40 ಹಣತೆಗಳನ್ನು ಒಯ್ಯುತ್ತಿದ್ದರು. ಈಗ ಅದೆಲ್ಲವೂ ಇತಿಹಾಸವಾಗಿದೆ. ಬೆರಳೆಣಿಕೆ ಸಂಖ್ಯೆಯಲ್ಲಿ ಮಣ್ಣಿನ ಹಣತೆ ಒಯ್ಯುವವರ ಸಂಖ್ಯೆಯೂ ವಿರಳವಾಗುತ್ತಿದೆ. ಕುಂಬಾರರ ಬಾಳಿಗೆ ದೀಪಾವಳಿ ಬೆಳಕು ನೀಡುವ ಹಬ್ಬವಾಗಿ ಉಳಿದಿಲ್ಲ.

ಇದನ್ನೂ ಓದಿ:ಕೊಹ್ಲಿ ಮಗು ಮೇಲೆ ಅತ್ಯಾಚಾರ ಬೆದರಿಕೆ; ದೆಹಲಿ ಪೊಲೀಸರಿಗೆ ಡಿಸಿಡಬ್ಲ್ಯೂ

Advertisement

ಆಧುನಿಕತೆ ಎಷ್ಟು ವೇಗವಾಗಿ ಸಾಗಿದೆ ಎಂದರೆ ಇಲ್ಲಿಯವರೆಗೂ ಮಣ್ಣಿನ ಹಣತೆ ಜಾಗವನ್ನು ಆವರಿಸಿದ್ದ ಪಿಂಗಾಣಿ ದೀಪಗಳೂ ಸಹ ಈಗ ಮರೆಯಾಗುತ್ತಿದ್ದು ಗ್ರಾಹಕರು ಎಲ್ ಇಡಿ ದೀಪಗಳಿಗೆ ಮೊರೆ ಹೋಗುತ್ತಿದ್ದಾರೆ.

ಬೂದಿ ಕಕ್ಕುವ ಬದುಕು
ಆಧುನಿಕತೆಯ ಭರಾಟೆಯ ಕಾರಣದಿಂದ ಈ ಮಣ್ಣಿನ ಹಣತೆ ಮೂಲೆ ಸೇರುತ್ತಿದ್ದು, ಕಲವೇ ಕೆಲವು ಕಟ್ಟಾ ಸಂಪ್ರದಾಯಸ್ಥರು ಮಾತ್ರ ಮಣ್ಣಿನ ಹಣತೆ ಖರೀದಿಸುವಂತಾಗಿದೆ. ಹಲವಾರು ವರ್ಷಗಳಿಂದ ಕಂಬಾರಿಕೆ ವೃತ್ತಿ ಮಾಡತ್ತ ಬಂದವರು ಈಗ ಬೇರೆ ವೃತಿಯತ್ತ ಮುಖ ಮಾಡಿದ್ದಾರೆ. ಆದರೆ ಕುಂಬಾರಿಕೆಯಿಂದ ಕುಟುಂಬ ನಿರ್ವಹಣೆ ಹೊರತುಪಡಿಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಆಗುತ್ತಿಲ್ಲ.

ತಾಲೂಕಿನಲ್ಲಿ ಸುಮಾರು 50 ಕಡೆಗಳಲ್ಲಿ ಕುಂಬಾರರು ಕುಲಕಸುಬು ವೃತ್ತಿಗಳಲ್ಲಿ ತೊಡಗಿಸಿ ಹಣತೆ, ಮಡಕೆ, ಗಡಿಗೆ, ಕುಡುಪೆ ಇನ್ನಿತರ ಗೃಹ ಬಳಕೆಯ ವಸ್ತುಗಳನ್ನು ತಯಾರಿಸುತ್ತಿದ್ದರು. ಆದರೇ ಈಗ ಸಿದ್ಧಪಡಿಸುವವರ ಸಂಖ್ಯೆ 20ಕ್ಕೆ ಇಳಿದಿದೆ. ಕಸುಬು ನಡೆಸುತ್ತಿದ್ದವರು ಈಗ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿಲ್ಲ. ಹೊಸಬರು ಈ ವೃತ್ತಿ ನಡೆಸಲು ಮುಂದೆ ಬರುತ್ತಿಲ್ಲ. ಜತೆಗೆ ಮಣ್ಣಿನ ವಸ್ತುಗಳಿಗೆ ಪ್ರೋತ್ಸಾಹ ಕೂಡ ನಿರೀಕ್ಷೆಯಂತೆ ಸಿಗುತ್ತಿಲ್ಲ. ಈ ಎಲ್ಲ ಕಾರಣಗಳಿಂದ ಮಣ್ಣಿನ ವಸ್ತುಗಳಿಗೆ ಬೇಡಿಕೆ ಕಮ್ಮಿಯಾಗಿದೆ. ಮಡಿಕೆ, ಸಣ್ಣ ಕುದೆ³ಗೂ ಬೇಡಿಕೆಯಿದ್ದರೂ ಮೊದಲಿನಷ್ಟಿಲ್ಲ. ಆರ್ಡರ್‌ ಕೊಟ್ಟವರಿಗಷ್ಟೆ ತಯಾರಿಸಿ ನೀಡುತ್ತಿದ್ದು. ಈ ಬಾರಿ 600 ಹಣತೆ ಸಿದ್ಧಪಡಿದ್ದೇವೆ ಎನ್ನುತ್ತಾರೆ ಕಳೆದ 45 ವರ್ಷಗಳಿಂದ ಹಣತೆ ಸೇರಿ ಮಣ್ಣಿನ ವಸ್ತುಗಳನ್ನು ತಯಾರಿಸುವ ಕಾರ್ಕಳ ಕಡಾರಿಯ ಅಣ್ಣು ವಸಂತಿ ಮೂಲ್ಯ ದಂಪತಿ.

ನಿರೀಕ್ಷಿತ ಲಾಭವಿಲ್ಲ
ಕುಂಬಾರ ಕುಟುಂಬಗಳು ತಯಾರಿಸುವ ಸಾಂಪ್ರದಾಯಿಕ ಮಣ್ಣಿನ ಹಣತೆಗಳು ಮಾರುಕಟ್ಟೆ ಪ್ರವೇಸುತಿಲ್ಲ. ಆರ್ಡರ್‌ ನೀಡಿದರಷ್ಟೆ ಸಿದ್ಧಪಡಿಸಿ ಕೊಡುವ ಕ್ರಮವಿದೆ. ಇತ್ತೀಚಿನ ವರ್ಷಗಳಲ್ಲಿ ಉತ್ಪಾದನ ವೆಚ್ಚ ಹೆಚ್ಚಾಗಿ ನಿರೀಕ್ಷಿತ ಲಾಭ ದೊರಕುತ್ತಿಲ್ಲ ಎಂಬುದು ಬೇಸರ ತರಿಸುತ್ತದೆ ಎನ್ನುತ್ತಾರೆ ಕುಂಬಾರ ಸಮುದಾಯದವರು.

Advertisement

Udayavani is now on Telegram. Click here to join our channel and stay updated with the latest news.

Next