ಹೊಸದಿಲ್ಲಿ: ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಯಮುನಾ ನದಿ ದಂಡೆ ಮೇಲೆ ಆಯೋಜಿಸಿದ್ದ ವಿಶ್ವ ಸಂಸ್ಕೃತಿ ಉತ್ಸವದಿಂದಾದ ಹಾನಿ ಕುರಿತ ವರದಿ ಬಗ್ಗೆ ಪ್ರಶ್ನಿಸಿದ್ದಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕೆಂಡಾಮಂಡಲವಾಗಿದೆ. ಇತ್ತೀಚೆಗೆ ನದಿ ದಂಡೆ ಮೇಲೆ ಆದ ಹಾನಿ ಕುರಿತಂತೆ 7 ಮಂದಿ ತಜ್ಞರ ಸಮಿತಿ ವರದಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ವರದಿ ಕುರಿತಂತೆ ದಿಲ್ಲಿ ಅಭಿವೃದ್ಧಿ ಪ್ರಾಧಿಕಾರ ಕೆಲವೊಂದು ಪ್ರಶ್ನೆಗಳನ್ನು ಕೇಳಿತ್ತು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮಂಡಳಿ
‘ಇದು ಸರಿಯಲ್ಲ. ಪರಿಸರಕ್ಕಾಗಿ ಕೆಲಸ ಮಾಡಿದವರ ಬಗ್ಗೆ ನೀವು ಹೇಳಿಕೆಗಳನ್ನು ಕೊಡುವಂತಿಲ್ಲ. ನಾವು ಎಚ್ಚರಿಕೆ ನೀಡುತ್ತಿದ್ದೇವೆ. ನೀವು ನ್ಯಾಯಿಕ ಕಟ್ಟುಪಾಡುಗಳನ್ನು ಮೀರಿದ್ದೇ ಆದಲ್ಲಿ ಯಾವುದೇ ಕ್ರಮ ಕೈಗೊಳ್ಳಲು ಹೇಸುವುದಿಲ್ಲ’ ಎಂದು ಖಡಕ್ ಆಗಿ ಹೇಳಿದೆ. ಈ ಪ್ರಾಧಿಕಾರದ ವಕೀಲರು, ತಜ್ಞರ ಸಮಿತಿ ನೀಡಿದ ವರದಿಯಲ್ಲಿ ಯಾವ ರೀತಿಯ ತಂತ್ರಜ್ಞಾನಗಳನ್ನು ಬಳಸಲಾಗಿದೆ ಮತ್ತು ಅದರಲ್ಲಿ ಹೇಳಿದ ಅಂಶಗಳ ಕುರಿತಷ್ಟೇ ಪ್ರಶ್ನಿದ್ದಾಗಿ ಹೇಳಿದರು.