ಉಡುಪಿಯಿಂದ ಮಂಚಕಲ್ ದಾರಿಯಾಗಿ ಕಾರ್ಕಳಕ್ಕೆ ಸಾಗುವ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಪ್ರಶಾಂತ ವಾತಾವರಣ ಹೊಂದಿರುವ ಪುಟ್ಟ ಪ್ರದೇಶ ಬಂಟಕಲ್. ಕೆಲವು ಅಂಗಡಿಗಳನ್ನು ಹೊರತುಪಡಿಸಿದರೆ ಕಲಾತ್ಮಕ ದೃಷ್ಟಿಯಿಂದ ಅಷ್ಟೇನೂ ಬೆಳವಣಿಗೆ ಹೊಂದಿದ ಪ್ರದೇಶವಲ್ಲ. ಇಲ್ಲಿನವರೇ ಆಗಿರುವ ರಮೇಶ್ ಬಂಟಕಲ್ ತನ್ನೂರಿನಲ್ಲಿ ಒಂದು ಆರ್ಟ್‌ಗ್ಯಾಲರಿಯನ್ನು ತೆರೆದರೆ ಹೇಗೆ ಎಂದು ಚಿಂತಿಸಿ ಪ್ರಣವ್ ಆರ್ಟ್‌ಗ್ಯಾಲರಿಯನ್ನು ತೆರೆದರು. ಬೆಳೆಯುತ್ತಿರುವ ಯುವ ಕಲಾವಿದರಿಗೆ ಹಾಗೂ ಸಣ್ಣ ಮಟ್ಟಿನ ಕಲಾಪ್ರದರ್ಶನ ನಡೆಸುವವರಿಗೆ ಈ ಗ್ಯಾಲರಿ ಸೂಕ್ತವಾಗಿದೆ. ಈಗಾಗಲೇ ಅಲ್ಲಿ ರಮೇಶ್ ಬಂಟಕಲ್ ಮತ್ತಿತರ ಕಲಾವಿದರ ಕಲಾಕೃತಿಗಳು ಇಲ್ಲಿ ರಾರಾಜಿಸುತ್ತಿವೆ.
ಕಲೆ-ಕಲಾವಿದ-ಕಲಾಪ್ರದರ್ಶನ-ಕಲಾಸಂಸ್ಥೆ ಯಾವುದೇ ಇರಲಿ ಅದು ಗ್ರಾಮೀಣ ಪ್ರದೇಶದೆಡೆಗೆ ತನ್ನ ಚಟುವಟಿಕೆಗಳನ್ನು ವಿಸ್ತರಿಸಿದಾಗ ನಾಡಿನ ಸಮಗ್ರ ಬೆಳವಣಿಗೆ ಸಾಧ್ಯವಾಗುತ್ತದೆ. ಈ ದೃಷ್ಟಿಯಿಂದ ಗಮನಿಸುವಾಗ ಗ್ರಾಮೀಣ ಪ್ರದೇಶಕ್ಕೆ ತೀರಾ ಆಧುನಿಕ ಕಲ್ಪನೆಯ ಕಲಾಪ್ರದರ್ಶನ ಹಿತವೆನಿಸುವುದಿಲ್ಲ. ಇಲ್ಲಿ ಹಳೆ ಬೇರಿನೊಂದಿಗೆ ಹೊಸ ಚಿಗುರೂ ಬೇಕು. ಪ್ರಕೃತಿ ದೃಶ್ಯ ಚಿತ್ರ, ಸಾಂಪ್ರದಾಯಿಕ, ನೈಜ ಚಿತ್ರ ಕಲಾಕೃತಿಗಳೊಂದಿಗೆ ಒಂದಿಷ್ಟು ನವ್ಯ ದೃಷ್ಟಿಕೋನದ ಕಲಾಕೃತಿಗಳಿದ್ದರೆ ಇಲ್ಲಿ ಕಲಾಪ್ರದರ್ಶನ ಗೆಲ್ಲುತ್ತದೆ. ಈ ಆರ್ಟ್‌ಗ್ಯಾಲರಿಯಲ್ಲಿ ನಿರಂತರ ಕಲಾಪ್ರದರ್ಶನಗಳು ನಡೆದಾಗ ಗ್ರಾಮೀಣ ಜನತೆಯಲ್ಲೂ ಕಲಾಭಿರುಚಿ ಹೆಚ್ಚಬಲ್ಲುದು.
Advertisement
ಉಪಾಧ್ಯಾಯ ಮೂಡುಬೆಳ್ಳೆ