ಬೆಂಗಳೂರು: ಮಕ್ಕಳಿಗೆ ವಿದ್ಯಾಭ್ಯಾಸದೊಂದಿಗೆ ಅವರಲ್ಲಿ ಅಡಗಿರುವ ಪ್ರತಿಭೆ, ಕಲೆಗೂ ಪೋಷಕರು ಪ್ರೋತ್ಸಾಹ ನೀಡಬೇಕು ಎಂದು ಅಂಕಣಕಾರ ರಾಮನಾಥ್ ತಿಳಿಸಿದರು.
ಕಲಾಕದಂಬ ಆರ್ಟ್ ಸೆಂಟರ್‌ನಿಂದ ಮನೋರಂಜಿನಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾರಂಪರಿಕ ಕಲೆಗಳಲ್ಲಿ ಒಂದಾದ ಯಕ್ಷಗಾನದ ಉನ್ನತಿಗಾಗಿ ಎಲ್ಲ ರೀತಿಯ ಪ್ರೋತ್ಸಾಹ ಅಗತ್ಯವಿದೆ.
ದಕ್ಷಿಣ ಕನ್ನಡಕ್ಕಷ್ಟೇ ಸೀಮಿತವಾಗಿದ್ದ ಈ ಯಕ್ಷಗಾನ ಇತ್ತೀಚಿಗೆ ನಾಡಿನಾದ್ಯಂತ ಪಸರಿಸುತ್ತಿದೆ. ಯಕ್ಷಗಾನ ಕಲಿಯುತ್ತಿರುವವರ ಸಂಖ್ಯೆಯೂ ಹೆಚ್ಚಾಗಿರುವುದು ಸಂತಸದ ಸಂಗತಿ ಎಂದರು.
ಮಕ್ಕಳ ಓದಿನ ಜತೆಗೆ ಅವರಲ್ಲಿ ಅಡಗಿರುವ ಪ್ರತಿಭೆಗೂ ಪೋಷಕರು ಪ್ರೋತ್ಸಾಹ ನೀಡಬೇಕು. ಆಗ ಎಲ್ಲ ಕಲೆಗಳು ಬೆಳೆದು ಶ್ರೀಮಂತವಾಗುತ್ತವೆ. ಮಕ್ಕಳಲ್ಲಿ ಯಕ್ಷಗಾನದ ಬಗ್ಗೆ ಆಸಕ್ತಿ ಮೂಡಿಸಿ ಅದರ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿರುವ ಕಲಾಕದಂಬ ಆರ್ಟ್ ಸೆಂಟರ್‌ನ ಕಾರ್ಯ ಶ್ಲಾಘನೀಯವಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರೊ.ಎಂ.ಎ.ಹೆಗಡೆ ಕೃತಿ ಆಧಾರಿತ ಕುಶ ಲವರ ಶೌರ್ಯದ ಪ್ರಸಂಗವನ್ನು ಮಕ್ಕಳು ಅದ್ಭುತವಾಗಿ ಅಭಿನಯಿಸಿದರು. ಭಾಗವತ ಸುಬ್ರಾಯ ಹೆಬ್ಟಾರ್ ನಿರ್ದೇಶನದಲ್ಲಿ ಈ ಯಕ್ಷಗಾನ ಪ್ರದರ್ಶನ ಮೂಡಿ ಬಂದಿತ್ತು.
ಕಾರ್ಯಕ್ರಮದಲ್ಲಿ ಕರಬ ಪ್ರತಿಷ್ಠಾನದ ದೇವರಾಜ ಕರಬ, ಸಿದ್ದಿಗಣಪತಿ ದೇವಾಲಯದ ಸಮಿತಿಯ ಸತ್ಯನಾರಾಯಣ್ ಉಪಸ್ಥಿತರಿದ್ದರು.