ಮಿಲಾನ್: ಇಲ್ಲಿನ ಸೂಪರ್ ಮಾರ್ಕೆಟೊಂದರಲ್ಲಿ ವ್ಯಕ್ತಿಯೊಬ್ಬ ಗುರುವಾರ ಅಲ್ಲಿದ್ದ ಶೆಲ್ಫ್ ನಿಂದ ಚಾಕು ತೆಗೆದು ಎದುರು ಸಿಕ್ಕ ಜನರಿಗೆ ಇರಿದ ಘಟನೆ ನಡೆದಿದೆ. ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದಾನೆ. ಸ್ಪ್ಯಾನಿಷ್ ಫುಟ್ ಬಾಲ್ ಆಟಗಾರ ಪಾಬ್ಲೋ ಮಾರಿ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಇಟಾಲಿಯನ್ ಅಧಿಕಾರಿಗಳು ತಿಳಿಸಿದ್ದಾರೆ.
ಮಿಲನ್ ನ ಉಪನಗರವಾದ ಅಸ್ಸಾಗೋದಲ್ಲಿನ ಶಾಪಿಂಗ್ ಸೆಂಟರ್ ನಲ್ಲಿ ಈ ದಾಳಿ ನಡೆದಿದ್ದು, ಶಂಕಿತ 46 ವರ್ಷದ ಇಟಾಲಿಯನ್ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸೂಪರ್ ಮಾರ್ಕೆಟ್ ಉದ್ಯೋಗಿಯೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಎಸ್ಎ ತಿಳಿಸಿದೆ. ಮೂವರ ಸ್ಥಿತಿ ಗಂಭೀರವಾಗಿದೆ. ಮತ್ತೊಬ್ಬ ವ್ಯಕ್ತಿ ಚಿಕಿತ್ಸೆ ಪಡೆದಿದ್ದರೂ ಆಸ್ಪತ್ರೆಗೆ ದಾಖಲಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ತೆರೆಗೆ ಬಂತು ನಮ್ಮ ಹೆಮ್ಮೆಯ ‘ಗಂಧದ ಗುಡಿ’: ಡ್ರೀಮ್ ಪ್ರಾಜೆಕ್ಟ್ ಅಶ್ವಿನಿ ಪುನೀತ್ ಮನದ ಮಾತು
ದಾಳಿಯ ಉದ್ದೇಶ ತಿಳಿದಿಲ್ಲ, ಆದರೆ ಆ ವ್ಯಕ್ತಿ ಮಾನಸಿಕವಾಗಿ ಅಸ್ವಸ್ಥನಂತೆ ತೋರುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಭಯೋತ್ಪಾದಕ ದಾಳಿಯಂತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಫುಟ್ ಬಾಲ್ ಆಟಗಾರ ಪಾಬ್ಲೋ ಮಾರಿ ಅವರು ಗಾಯಗೊಂಡಿದ್ದಾರೆ. ಮಾರಿ ಆಸ್ಪತ್ರೆಯಲ್ಲಿದ್ದರೂ ಗಂಭೀರವಾಗಿ ಗಾಯಗೊಂಡಿಲ್ಲ ಎಂದು ಆರ್ಸೆನಲ್ ಹೇಳಿಕೆಯಲ್ಲಿ ತಿಳಿಸಿದೆ.