Advertisement

ಬ್ರಿಟನ್‌ನಿಂದ 3,137 ಪ್ರಯಾಣಿಕರ ಆಗಮನ: ಸರಕಾರದಿಂದ ಮಾಹಿತಿ

10:41 PM Jan 06, 2021 | Team Udayavani |

ಬೆಂಗಳೂರು: ಬ್ರಿಟನ್‌ನಿಂದ ರಾಜ್ಯಕ್ಕೆ ಒಟ್ಟು 3,137 ಪ್ರಯಾಣಿಕರು ಬಂದಿದ್ದು, 3,061 ಪ್ರಯಾಣಿಕರನ್ನು ಪತ್ತೆ ಹಚ್ಚಲಾಗಿದೆ. ಆ ಪೈಕಿ 2,292 ಮಂದಿಗೆ ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸಲಾಗಿದೆ ಎಂದು ಹೈಕೋರ್ಟ್‌ಗೆ ಸರಕಾರ ಮಾಹಿತಿ ನೀಡಿದೆ.

Advertisement

ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಸರಕಾರ ಹಾಗೂ ಬಿಬಿಎಂಪಿಗೆ ನಿರ್ದೇಶಿಸಲು ಕೋರಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾ| ಎ. ಎಸ್‌. ಓಕ್‌ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಸರಕಾರಿ ವಕೀಲ ವಿಕ್ರಂ ಹುಯಿಲಗೋಳ್‌ ಲಿಖೀತ ಹೇಳಿಕೆ ಸಲ್ಲಿಸಿ, ಡಿ.7ರ ಬಳಿಕ ಬ್ರಿಟನ್‌ನಿಂದ ರಾಜ್ಯಕ್ಕೆ ಒಟ್ಟು 3,137 ಪ್ರಯಾಣಿಕರು ಬಂದಿದ್ದಾರೆ. ಅವರಲ್ಲಿ 3,061 ಪ್ರಯಾಣಿಕರನ್ನು ಪತ್ತೆ ಹಚ್ಚಲಾಗಿದೆ. ಇಂಗ್ಲೆಂಡ್‌ನಿಂದ ರಾಜ್ಯಕ್ಕೆ ಬಂದು ಹೊರ ರಾಜ್ಯಕ್ಕೆ ತೆರಳಿದ ಪ್ರಯಾಣಿಕರ ಸಂಖ್ಯೆ 594 ಆಗಿದ್ದು, ಅವರಲ್ಲಿ 75 ಪ್ರಯಾಣಿಕರು ಈವರೆಗೆ ಪತ್ತೆಯಾಗಿಲ್ಲ ಎಂದು ತಿಳಿಸಿದರು.

ಈವರೆಗೆ 2,292 ಪ್ರಯಾಣಿಕರಿಗೆ ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸಲಾಗಿದ್ದು, 176 ಮಂದಿಯ ಫ‌ಲಿತಾಂಶ ಬರಬೇಕಿದೆ. ಒಟ್ಟು 34 ಪ್ರಯಾಣಿಕರಲ್ಲಿ ಕೋವಿಡ್‌-19 ಸೋಂಕು ಪತ್ತೆಯಾಗಿದೆ ಎಂದು ಸರಕಾರ ನೀಡಿದ ಲಿಖೀತ ಹೇಳಿಕೆಯಲ್ಲಿ ಮಾಹಿತಿ ನೀಡಲಾಗಿದೆ.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪತ್ತೆಯಾಗಿರುವ 3,061 ಪ್ರಯಾಣಿಕರ ಪೈಕಿ 2,292 ಪ್ರಯಾಣಿಕರನ್ನು ಮಾತ್ರ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಪಡಿಸಲಾಗಿದೆ. ಉಳಿದ 700ಕ್ಕೂ ಹೆಚ್ಚು ಪ್ರಯಾಣಿಕರಿಗೆ ಯಾಕೆ ಪರೀಕ್ಷೆ ನಡೆಸಿಲ್ಲ ಎಂದು ಪ್ರಶ್ನಿಸಿ, ವಿಚಾರಣೆಯನ್ನು ಜ.12ಕ್ಕೆ ಮುಂದೂಡಿತು.

Advertisement

ಏಳು ಲ್ಯಾಬ್‌ಗಳಿಗೆ ದಂಡ
ಆರ್‌ಟಿಪಿಆರ್‌ ಪರೀಕ್ಷೆಯ ಫ‌ಲಿತಾಂಶವನ್ನು 48 ಗಂಟೆಗಳಿಗಿಂತ ವಿಳಂಬವಾಗಿ ನೀಡುವ ಮತ್ತು ಐಸಿಎಂಆರ್‌ ವೆಬ್‌ಪೋರ್ಟಲ್‌ನಲ್ಲಿ ವಿಳಂಬವಾಗಿ ದಾಖಲಿಸುವ ಖಾಸಗಿ ಪ್ರಯೋಗಾಲಯಗಳಿಗೆ ಪರೀಕ್ಷೆಗೆ ತಗಲಿರುವ ಮೊತ್ತದಲ್ಲಿ ಶೇ. 10ರಷ್ಟು ದಂಡ ವಿಧಿಸಬೇಕಾಗುತ್ತದೆ. ಅದರಂತೆ ನಗರದ ಏಳು ಖಾಸಗಿ ಪ್ರಯೋಗಾಲಯಗಳಲ್ಲಿ ಒಟ್ಟು 410 ಪ್ರಕರಣಗಳಲ್ಲಿ ಫ‌ಲಿತಾಂಶ ವಿಳಂಬವಾಗಿದೆ. ಅದಕ್ಕಾಗಿ ಅವುಗಳಿಗೆ ದಂಡ ವಿಧಿಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next