Advertisement
ಈ ಹಿನ್ನೆಲೆಯಲ್ಲಿ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಹಿರಿಯ ಅಧಿಕಾರಿಗಳೊಡನೆ ಕೈಗೊಳ್ಳಬಹುದಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ದೇಶದ ಉತ್ತರ ಮತ್ತು ಪಶ್ಚಿಮ ಭಾಗದಲ್ಲಿರುವ ಪರಮಾಣು ಕೇಂದ್ರಗಳು, ವಿಮಾನ ನಿಲ್ದಾಣಗಳು, ವಾಯು, ನೌಕೆ ಮತ್ತು ಸೇನಾ ನೆಲೆಗಳು, ವಿವಿಧ ಪಟ್ಟಗಳಲ್ಲಿರುವ ದಂಡು ಪ್ರದೇಶಗಳಲ್ಲಿ ಬಿಗಿಭದ್ರತೆ ಹೆಚ್ಚಿಸಲು ಸೂಚಿಸಲಾಗಿದೆ. ಪಂಬಾಜ್‌ನ ಐದು ಜಿಲ್ಲೆಗಳಾದ ಗುರುದಾಸ್ಪುರ, ತಾರ್ನ್ ತರಣ್, ಅಮೃತಸರ, ಫಿರೋಝೆಪುರ್ ಹಾಗೂ ಫಾಝಿಲ್ಕಾ ಜಿಲ್ಲೆಗಳ 553 ಕಿ.ಮೀ. ದೂರದ ಪಾರ್ಶ್ವವು ಪಾಕಿಸ್ತಾನ ಗಡಿಯೊಂದಿಗೆ ಹೊಂದಿಕೊಂಡಿರುವುದರಿಂದ ಆ ಜಿಲ್ಲೆಗಳ ಭದ್ರತೆಗೆ ವಿಶೇಷ ಗಮನ ನೀಡುವಂತೆ ಸೂಚಿಸಲಾಗಿದೆ.
ಪಾಕಿಸ್ತಾನದ ಗಡಿಗೆ ಸಮೀಪವಿರುವ ರಾಜ್ಯಗಳಾದ ಜಮ್ಮು ಕಾಶ್ಮೀರ, ಪಂಜಾಬ್ ಮತ್ತು ಹಿಮಾಚಲ ಪ್ರದೇಶಗಳಲ್ಲಿರುವ ಒಂಭತ್ತು ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಕೇಂದ್ರ ಸರ್ಕಾರ, ಬುಧವಾರ ಬೆಳಗ್ಗೆ ಆದೇಶ ಹೊರಡಿಸಿತ್ತು. ಇದರಿಂದಾಗಿ, ಅಮೃತಸರ, ಜಮ್ಮು, ಶ್ರೀನಗರ ಹಾಗೂ ಲೇಹ್ ಮುಂತಾದೆಡೆ ಪ್ರಯಾಣಿಕರು ಪರದಾಡಿದರು. ಆದರೆ, ಮಧ್ಯಾಹ್ನದ ಹೊತ್ತಿಗೆ ಆದೇಶವನ್ನು ಹಿಂಪಡೆಯಲಾಯಿತು. ಇದರಿಂದಾಗಿ, ಆ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಹಾರಾಟ ಎಂದಿನಂತೆ ಆರಂಭವಾಯಿತು.