ಬೆಂಗಳೂರು: ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ಸಾರ್ವಜನಿಕರ ಮೊಬೈಲ್‌ಗಳನ್ನು ಕಳವು ಮಾಡುತ್ತಿದ್ದ ಎಲೆಕ್ಟ್ರಿಕಲ್ ಎಂಜಿನಿಯರ್ ಸೇರಿ ಇಬ್ಬರನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗ ಹಿರಿಯೂರು ತಾಲೂಕಿನ ರಂಗನಾಥ್(32) ಮತ್ತು ಗಿರೀಶ್ ಕುಮಾರ್(23) ಬಂಧಿತರು. ಆರೋಪಗಳಿಂದ 20 ಲಕ್ಷ ರೂ. ಮೌಲ್ಯದ 68 ವಿವಿಧ ಕಂಪನಿಯ ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿಗಳ ಪೈಕಿ ರಂಗನಾಥ್ ವಿರುದ್ಧ ಹಾಸನ, ಬೆಂಗಳೂರಿನಲ್ಲಿ ಈ ಹಿಂದೆ ವಾಹನ ಕಳವು ಪ್ರಕರಣಗಳು ದಾಖಲಾಗಿವೆ. ಮತ್ತೂಬ್ಬ ಆರೋಪಿ ಗಿರೀಶ್‌ಕುಮಾರ್ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ತನಗೆ ಬರುತ್ತಿದ್ದ ವೇತನದಲ್ಲಿ ಜೀವನ ನಿರ್ವಹಣೆ ಕಷ್ಟವಾಗಿತ್ತು. ಹೀಗಾಗಿ ತನ್ನ ಊರಿನವನಾದ ರಂಗನಾಥ್‌ನನ್ನು ಪರಿಚಯಸಿಕೊಂಡು, ಇಬ್ಬರು ಒಟ್ಟಿಗೆ ಬೈಕ್‌ಗಳಲ್ಲಿ ತೆರಳಿ ಮೊಬೈಲ್‌ಗಳ ಕಳವು ಮಾಡುತ್ತಿದ್ದರು. ಇದರೊಂದಿಗೆ ಖಾಸಗಿ ಕಂಪನಿಯಲ್ಲೂ ಗಿರೀಶ್ ಕೆಲಸ ಮಾಡಿಕೊಂಡಿದ್ದ ಎಂಬುದು ಗೊತ್ತಾಗಿದೆ.
ಇತ್ತೀಚೆಗೆ ಮಹದೇವಪುರ ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕರೊಬ್ಬರು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ನಡೆದುಕೊಂಡು ಹೋಗುತ್ತಿದ್ದರು. ಆಗ ಅವರನ್ನು ಬೈಕ್‌ನಲ್ಲಿ ಹಿಂಬಾಲಿಸಿದ ಆರೋಪಿಗಳು ಮೊಬೈಲ್ ಕದ್ದು ಪರಾರಿಯಾಗಿದ್ದರು. ಹೀಗೆ ಜನನಿಬೀಡ ಪ್ರದೇಶಗಳಾದ ಟಿನ್‌ಫ್ಯಾಕ್ಟರಿ, ಮಾರತ್ತಹಳ್ಳಿ, ಹೆಬ್ಟಾಳ, ಸಿಲ್ಕ್ ಬೋರ್ಡ್ ಮುಂತಾದ ಸ್ಥಳಗಳಲ್ಲಿ ರಸ್ತೆ ಬದಿಯಲ್ಲಿ ಒಂಟಿಯಾಗಿ ನಡೆದುಕೊಂಡು ಹೋಗುವ ಸಾರ್ವಜನಿಕರ ಮೊಬೈಲ್‌ಗಳನ್ನು ಕಸಿದುಕೊಂಡು ಪರಾರಿಯಾಗುತ್ತಿದ್ದರು. ಬಳಿಕ ಅವುಗಳನ್ನು ತಮ್ಮ ಸ್ವಂತ ಊರು ಹಿರಿಯೂರಿನಲ್ಲಿ ಕಡಿಮೆ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.