Advertisement
ಪಾಕ್ನಿಂದ ಕರ್ನಾಟಕಕ್ಕೆ ಅಕ್ರಮವಾಗಿ ಬರುವ ವಲಸಿಗರ ಮೇಲೆ ರಾಜ್ಯ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಪಾಕ್ನಿಂದ ಬಂದಿರುವ ವಲಸಿಗರ ಮಾಹಿತಿಯನ್ನು ಈಗಾಗಲೇ ಗೌಪ್ಯವಾಗಿ ತನಿಖೆ ನಡೆಸಿ ಕಲೆ ಹಾಕಿದ್ದಾರೆ. ಬೆಂಗಳೂರಿನ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್ಆರ್ಆರ್ಒ)ಯಿಂದ ಪಾಕ್ ಅಕ್ರಮ ವಲಸಿಗರು ನೆಲೆಸಿರುವ ರಾಜ್ಯದ ಜಿಲ್ಲೆಗಳ ಆಯಾ ಪೊಲೀಸರಿಗೆ ಮಾಹಿತಿ ರವಾನಿಸಲಾಗಿದೆ. ಈ ಮಾಹಿತಿ ಆಧರಿಸಿ ಸ್ಥಳೀಯ ಪೊಲೀಸರು ಅಕ್ರಮ ಪಾಕಿಸ್ಥಾನೀಯರ ಪತ್ತೆಗಾಗಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ರಾಜ್ಯದಲ್ಲಿ ಎಷ್ಟು ಮಂದಿ ಪಾಕಿಸ್ಥಾನೀಯರು ಅಕ್ರಮವಾಗಿ ನೆಲೆಸಿದ್ದಾರೆ ಎಂಬ ಬಗ್ಗೆ ಅಂದಾಜಿಸಲಾಗಿದ್ದು, ತನಿಖಾ ದೃಷ್ಟಿಯಿಂದ ಈ ಮಾಹಿತಿ ನೀಡಲು ಎಫ್ಆರ್ಆರ್ಒ ಅಧಿಕಾರಿಗಳು ನಿರಾಕರಿಸಿದ್ದಾರೆ. ಜಿಗಣಿ ಸೇರಿ ರಾಜ್ಯದ ವಿವಿಧೆಡೆ ಇತ್ತೀಚೆಗೆ ಸಿಕ್ಕಿಬಿದ್ದಿದ್ದ 11 ಅಕ್ರಮ ಪಾಕ್ ವಲಸಿಗರ ವಿಚಾರಣೆಯಲ್ಲಿ ಪಾಕ್ನ ಇನ್ನಷ್ಟು ಮಂದಿ ಕರ್ನಾಟಕ ಹಾಗೂ ದೇಶದ ವಿವಿಧ ರಾಜ್ಯಗಳಲ್ಲಿ ನೆಲೆಸಿರುವುದು ಪತ್ತೆಯಾಗಿದೆ. ಬಂಧಿತರನ್ನು ಪಾಕಿಸ್ಥಾನಕ್ಕೆ ವಾಪಸ್ ಕಳುಹಿಸಲು ಎಫ್ಆರ್ಆರ್ಒ ಮೂಲಕ ಪಾಕಿಸ್ಥಾನ ರಾಯಭಾರ ಕಚೇರಿಯನ್ನು ಸಂಪರ್ಕಿಸಲು ಸಿದ್ಧತೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಪಾಕಿಸ್ಥಾನದಲ್ಲಿ ಮೆಹದಿ ಪಂಗಡದ ಹಲವು ಪ್ರಜೆಗಳಿದ್ದಾರೆ. ಆದರೆ ಮೆಹದಿ ಪಂಗಡದವರ ನಂಬಿಕೆ, ಧಾರ್ಮಿಕ ವಿಧಿವಿಧಾನ ಹಾಗೂ ಆಚರಣೆಗಳು ಇಸ್ಲಾಂಗೆ ವಿರುದ್ಧವಾಗಿವೆ ಎಂಬ ಕಾರಣಕ್ಕಾಗಿ ಪಾಕಿಸ್ಥಾನ ದಲ್ಲಿ ಇವರ ಧಾರ್ಮಿಕ ವಿಧಿ ವಿಧಾನಕ್ಕೆ ಅವಕಾಶ ನೀಡುತ್ತಿಲ್ಲ.
Related Articles
ರಾಜ್ಯದಲ್ಲಿ ಒಟ್ಟಾರೆ ಎಲ್ಲ ವಿದೇಶಿಗರು ಸೇರಿ 780ಕ್ಕೂ ಹೆಚ್ಚಿನ ಅಕ್ರಮ ವಲಸಿಗರಿದ್ದಾರೆ. ಇನ್ನು ಲೆಕ್ಕಕ್ಕೆ ಸಿಗದೆ ಅಕ್ರಮವಾಗಿ ನೆಲೆಸಿರುವ ಸಾವಿರಾರು ವಿದೇಶಿಗರಿದ್ದಾರೆ. ಈ ಪೈಕಿ ಆಫ್ರಿಕಾ ಖಂಡದ ನೈಜೀರಿಯಾ, ಉಗಾಂಡದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವ್ಯಾಸಂಗ ಅಥವಾ ಉದ್ಯಮ ವೀಸಾದಡಿ ಕರ್ನಾಟಕಕ್ಕೆ ಬಂದು ಇಲ್ಲೇ ಅಕ್ರಮವಾಗಿ ನೆಲೆಸುತ್ತಾರೆ. ಈಗ ಅಕ್ರಮವಾಗಿ ಕರ್ನಾಟಕದಲ್ಲಿ ನೆಲೆಸಿರುವವರ ಪೈಕಿ ಪಾಕಿಸ್ಥಾನೀಯರ ಪ್ರಮಾಣವೂ ಹೆಚ್ಚುತ್ತಿದೆ ಎಂದು ತಿಳಿದು ಬಂದಿದೆ.
Advertisement
ಪಾಕಿಸ್ಥಾನದಿಂದ ಕರ್ನಾಟಕ ಪ್ರವೇಶ ಹೇಗೆ?ಪಾಕಿಸ್ಥಾನದಿಂದ ಕರ್ನಾಟಕಕ್ಕೆ ನುಸುಳಿದ್ದಾರೆ ಎನ್ನಲಾದ ಅಕ್ರಮ ವಲಸಿಗರು ಪಾಕಿಸ್ಥಾನದಿಂದ ನೇರವಾಗಿ ಬಾಂಗ್ಲಾ ದೇಶಕ್ಕೆ ಬರುತ್ತಾರೆ. ಅನಂತರ ಬಾಂಗ್ಲಾ ಗಡಿ ನುಸುಳಿ ಪಶ್ಚಿಮ ಬಂಗಾಲದ ಮೂಲಕ ಭಾರತಕ್ಕೆ ಕಾಲಿಡುತ್ತಾರೆ. ಪಶ್ಚಿಮ ಬಂಗಾಲದಿಂದ ರೈಲಿನ ಮೂಲಕ ಕರ್ನಾಟಕ ಸೇರಿ ವಿವಿಧ ರಾಜ್ಯಗಳಿಗೆ ಪ್ರವೇಶಿಸುತ್ತಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಪಾಕಿಸ್ಥಾನದಿಂದ ವಲಸೆ ಬಂದಿರುವ 11 ಮಂದಿ ಇತ್ತೀಚೆಗೆ ಸಿಕ್ಕಿಬಿದ್ದಿದ್ದಾರೆ. ಅಕ್ರಮವಾಗಿ ನೆಲೆಸಿರುವವರ ವಿರುದ್ಧ ಕಾರ್ಯಾಚರಣೆಗಳು ನಡೆಯುತ್ತಿವೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ.
– ಸಂತೋಷ್ ಬಾಬು, ನಿರ್ದೇಶಕ, ಎಫ್ಆರ್ಆರ್ಒ, ಬೆಂಗಳೂರು ಅವಿನಾಶ ಮೂಡಂಬಿಕಾನ