Advertisement

ಜಮ್ಮು ಕಾಶ್ಮೀರದಲ್ಲಿ ಜನಜೀವನ ಹಾಳುಗೆಡವಲು ಪಾಕ್ ಸಂಚು: ಸೆರೆ ಸಿಕ್ಕ ಉಗ್ರರು ಹೆಳಿದ್ದೇನು?

09:31 AM Sep 03, 2019 | Hari Prasad |

ಶ್ರೀನಗರ: ಜಮ್ಮುಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಶಾಂತಿ ಕದಡಲು ಪಾಕಿಸ್ತಾನ ನಿರಂತರವಾಗಿ ಅಗೋಚರ ಪ್ರಯತ್ನಗಳನ್ನು ಮಾಡುತ್ತಿರುವ ಸತ್ಯ ಮತ್ತೊಮ್ಮೆ ಪುರಾವೆ ಸಹಿತ ಸಾಬೀತಾಗಿದೆ. ಇತ್ತೀಚೆಗಷ್ಟೇ ಭಾರತೀಯ ಸೇನಾಪಡೆಗಳು ಉಗ್ರರೊಂದಿಗಿನ ಹೋರಾಟದ ಸಂದರ್ಭದಲ್ಲಿ ವಶಕ್ಕೆ ಪಡೆದುಕೊಂಡಿರುವ ಪಾಕ್ ಮೂಲದ ಉಗ್ರರಿಬ್ಬರು ಈ ಕಟು ಸತ್ಯವನ್ನು ವಿಚಾರಣೆಯ ಸಂದರ್ಭದಲ್ಲಿ ಬಾಯಿ ಬಿಟ್ಟಿದ್ದಾರೆ.

Advertisement

ಅದರಲ್ಲೂ ಭಾರತ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಕಲ್ಪಿಸುವ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕವಂತೂ ಪಾಕಿಸ್ತಾನದ ಹತಾಶೆ ಮೇರೆ ಮೀರಿದ್ದು ಇಸ್ಲಾಮಾಬಾದ್ ನಲ್ಲಿರುವ ಪಾಕಿಸ್ತಾನದ ಉನ್ನತ ಅಧಿಕಾರಿಗಳು ಇದೀಗ ಕಾಶ್ಮೀರದಲ್ಲಿ ಜನಸಾಮಾನ್ಯರ ದೈನಂದಿನ ಜನಜೀವನವನ್ನು ಕೆಡಿಸಲು ಉಗ್ರರನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಆತಂಕಕಾರಿ ಮಾಹಿತಿಯನ್ನು ವಿಚಾರಣೆಯ ಸಂದರ್ಭದಲ್ಲಿ ಬಂಧಿತ ಉಗ್ರರು ಬಾಯ್ಬಿಟ್ಟಿದ್ದಾರೆ.

ಬಂಧಿತ ಉಗ್ರರಾಗಿರುವ ಖಲೀಲ್ ಅಹಮ್ಮದ್ ಮತ್ತು ನಝೀಮ್ ಖೋಕರ್ ಅವರು ಪಾಕಿಸ್ತಾನ ಜಮ್ಮು ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸಲು ಯಾವೆಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಎಳೆಎಳೆಯಾಗಿ ಬಾಯ್ಬಿಟ್ಟಿದ್ದಾರೆ.

ಕಾಶ್ಮೀರದಲ್ಲಿ ಶಾಂತಿ ಕದಡಲು ಮತ್ತು ಉಗ್ರ ಚಟುವಟಿಕೆಗಳನ್ನು ನಡೆಸಲು ಪಾಕಿಸ್ತಾನ ಸೇನೆಯೇ ಉಗ್ರರಿಗೆ ತರಬೇತು ನೀಡಿ ಗಡಿ ನುಸುಳಲು ಸಹಾಯ ಮಾಡುತ್ತದೆ. ಮಾತ್ರವಲ್ಲದೇ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆ ನಡೆಸುತ್ತಿರುವ ಶಿಬಿರಗಳಿಗೆ ಉಗ್ರರನ್ನು ಕಳುಹಿಸಿ ಅಲ್ಲಿ ಶಸ್ತ್ರಾಸ್ತ್ರ ತರಬೇತಿಯನ್ನು ನೀಡುವ ಜವಾಬ್ದಾರಿಯನ್ನೂ ಸಹ ಪಾಕಿಸ್ತಾನ ಸೇನೆಯೇ ವಹಿಸಿಕೊಂಡಿದೆ ಎಂದು ಈ ಇಬ್ಬರು ಉಗ್ರರು ಬಾಯಿ ಬಿಟ್ಟಿದ್ದಾರೆ.

ಪಾಕಿಸ್ತಾನವು ಏಳು ಜನ ಎಲ್.ಇ.ಟಿ. ಉಗ್ರರ ಒಂದು ಗುಂಪನ್ನು ತರಬೇತುಗೊಳಿಸಿ ಭಾರತದ ನೆಲದೊಳಕ್ಕೆ ನುಗ್ಗಿಸಿದ್ದು ಆ ಗುಂಪಿನ ಸದಸ್ಯರೇ ಇದೀಗ ಭಾರತೀಯ ಪಡೆಗಳಿಗೆ ಸೆರೆ ಸಿಕ್ಕಿರುವ ಈ ಅಹಮ್ಮದ್ ಮತ್ತು ಖೋಕರ್ ಆಗಿದ್ದಾರೆ. ಈ ಗುಂಪಿನಲ್ಲಿ ಮೂವರು ಅಫ್ಘಾನಿಸ್ಥಾನ ಪ್ರಜೆಗಳೂ ಇದ್ದಾರೆ ಎಂಬ ಸತ್ಯ ಬಯಲಾಗಿದೆ. ಮತ್ತು ಈ ಉಗ್ರರ ಗುಂಪಿಗೆ ಭಾರತೀಯ ಸೇನಾ ಪಡೆಗಳನ್ನು ಗುರಿಯಾಗಿಸಿ ದಾಳಿಗಳನ್ನು ನಡೆಸಲು ಸ್ಪಷ್ಟ ನಿರ್ದೇಶನವನ್ನೂ ಸಹ ನೀಡಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next