ಬೆಂಗಳೂರು: ಮನೆಗಳ್ಳತನ ಮಾಡಿ ಚಿನ್ನಾಭರಣ ಹಂಚಿಕೆ ವಿಚಾರದಲ್ಲಿ ರಸ್ತೆ ಬದಿ ಜಗಳವಾಡುತ್ತಿದ್ದ ಮೂವರು ಕಳ್ಳರು ಬೇಗೂರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕೆ.ಜಿ.ನಗರದ ಗವಿಪುರ ಗುಟ್ಟಹಳ್ಳಿ ನಿವಾಸಿಗಳಾದ ಗಣೇಶ್ (21), ಶಾಂತಕುಮಾರ್ (20) ಮತ್ತು ವೀರಮಣಿ (20) ಬಂಧಿತರು. ಆರೋಪಿಗಳಿಂದ ಚಿನ್ನಾಭರಣ ಜಪ್ತಿ ಮಾಡಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಬೇಗೂರು ಠಾಣೆ ಪೊಲೀಸರು ತಿಳಿಸಿದ್ದಾರೆ.
ಡಿ.12 ರಂದು ಮಧ್ಯಾಹ್ನ 3 ಗಂಟೆಯಲ್ಲಿ ಬೇಗೂರು ಪೊಲೀಸರು ಗಾರ್ವೆಬಾವಿ ಪಾಳ್ಯದಲ್ಲಿ ಗಸ್ತು ತಿರುತ್ತಿದ್ದರು. ಮೂವರು ಆರೋಪಿಗಳು ರಸ್ತೆಬದಿ ವಸ್ತುವೊಂದರ ಹಂಚಿಕೆ ವಿಚಾರವಾಗಿ ಜಗಳ ಮಾಡಿಕೊಳ್ಳುತ್ತಿದ್ದರು. ಪೊಲೀಸರನ್ನು ನೋಡಿದ ಆರೋಪಿಗಳು ಸ್ಥಳದಿಂದ ಓಡಿಹೋಗಲು ಯತ್ನಿಸಿದ್ದಾರೆ.
ಬಳಿಕ ಅವರ ಬೆನ್ನಟ್ಟಿದ ಪೊಲೀಸರು ಮೂವರನ್ನು ವಶಕ್ಕೆ ಪಡೆದುಕೊಂಡು ಅವರ ಬ್ಯಾಗ್‌ಗಳನ್ನು ಪರಿಶೀಲಿಸಿದಾಗ ಚಿನ್ನಾಭರಣ ಪತ್ತೆಯಾಗಿದೆ. ಈ ಬಗ್ಗೆ ಪ್ರಶ್ನೆ ಮಾಡಿದಾಗ ಮೂವರು ಗೊಂದಲದ ಹೇಳಿಕೆ ನೀಡಿದ್ದು, ರಶೀದಿ ಕೂಡ ನೀಡಿಲ್ಲ. ಆರೋಪಿಗಳನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ಹೇಳಿದರು.
ಆರೋಪಿಗಳು ಬೀಗ ಹಾಕಿದ್ದ ಮನೆಗಳಿಗೆ ನುಗ್ಗಿ ಕಳವು ಮಾಡಿದ್ದಾರೆ. ಕದ್ದ ಚಿನ್ನಾಭರಣ ಮಾರಾಟ ಮಾಡಿ, ಬಂದ ಹಣದಲ್ಲಿ ಮಜಾ ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ. 2018ರ ಜುಲೈನಲ್ಲಿ ಕೆಂಪೇಗೌಡ ನಗರ ಪೊಲೀಸರು ಇದೇ ಮೂವರು ಆರೋಪಿಗಳನ್ನು ಬಂಧಿಸಿ, 2 ಕೆ.ಜಿ. ಚಿನ್ನಾಭರಣ ಜಪ್ತಿ ಮಾಡಿದ್ದರು. ಇತ್ತೀಚೆಗೆ ಜಾಮೀನು ಪಡೆದು ಹೊರ ಬಂದಿರುವ ಆರೋಪಿಗಳು ಮತ್ತೆ ಕೃತ್ಯ ಮುಂದುವರಿಸಿದ್ದಾರೆ ಎಂದು ಪೊಲೀಸರು ಹೇಳಿದರು.