ಬೆಂಗಳೂರು: ಓದಿದ್ದು ಏಳನೆ ತರಗತಿಯಾದರೂ ಆನ್‌ಲೈನ್ ಮಾರಾಟ ತಾಣವನ್ನೇ ವಂಚನೆಯ ಅಸ್ತ್ರವನ್ನಾಗಿ ಬಳಸಿಕೊಂಡು ಐದು ಬೈಕ್‌ಗಳನ್ನು ಕಳವು ಮಾಡಿದ್ದ ಕಳ್ಳನೊಬ್ಬ ಹೆಬ್ಬಾಳ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಎಚ್‌ಬಿಆರ್ ಲೇಔಟ್‌ನ ಮೊಹಮ್ಮದ್ ಸಲೀಂ (30) ಬಂಧಿತ ಆರೋಪಿ. ಈತನ ಬಂಧನದಿಂದ ಐದು ಪ್ರತ್ಯೇಕ ಬೈಕ್ ಕಳವು ಕೇಸ್‌ಗಳು ಪತ್ತೆಯಾಗಿವೆ. ಆರೋಪಿಯಿಂದ ಐದು ಲಕ್ಷ ರೂ. ಮೌಲ್ಯದ ನಾಲ್ಕು ಬೈಕ್‌ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಏಳನೇ ತರಗತಿ ವಿಧ್ಯಾಭ್ಯಾಸ ಮಾಡಿಕೊಂಡಿರುವ ಆರೋಪಿ ಮೊಹಮದ್ ಸಲೀಂ, ಮೋಜಿನ ಜೀವನ ನಡೆಸುವ ಉದ್ದೇಶದಿಂದ ಸುಲಭವಾಗಿ ಹಣ ಸಂಪಾದಿಸಲು ವಂಚನೆ ತಂತ್ರ ಬಳಸುತ್ತಿದ್ದ. ಅದರ ಭಾಗವಾಗಿ ಒಎಲ್‌ಎಕ್ಸ್ ಆನ್‌ಲೈನ್ ಮಾರಾಟ ತಾಣವನ್ನು ವಂಚನೆಗೆ ದಾರಿ ಮಾಡಿಕೊಂಡಿದ್ದ. ಒಎಲ್‌ಎಕ್ಸ್‌ನಲ್ಲಿ ಕೆಲವು ಬೈಕ್‌ಗಳನ್ನು ಮಾರಾಟ ಮಾಡಲು ಜಾಹೀರಾತು ಪ್ರದರ್ಶಿಸುತ್ತಿದ್ದರು.
ಅಂತಹವರ ದೂರವಾಣಿ ನಂಬರ್ ಪಡೆದು ಕರೆ ಮಾಡುತ್ತಿದ್ದ. ಬಳಿಕ ಅವರನ್ನು ಬೈಕ್ ಸಮೇತ ಕರೆಸಿಕೊಂಡು, ದಾಖಲೆಗಳನ್ನು ಪಡೆದುಕೊಂಡು ಟ್ರಯಲ್ ರೈಡ್ ಮಾಡುತ್ತೇನೆ, ಇಲ್ಲವೇ ನಮ್ಮ ಪೋಷಕರಿಗೆ ಬೈಕ್ ತೋರಿಸಿಕೊಂಡು ಬರುತ್ತೇನೆ ಎಂದು ಹೇಳಿ ಬೈಕ್ ಸಮೇತ ಪರಾರಿಯಾಗುತ್ತಿದ್ದ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಕಂಡೋರ ಮನೆ ತೋರಿಸಿದ: ಕಳೆದ ಏಪ್ರಿಲ್ ತಿಂಗಳಲ್ಲಿ ಸನತ್‌ಕುಮಾರ್ ಭಟ್ಟ ಎಂಬವರು ತಮ್ಮ ಯಮಹಾ ಬೈಕ್‌ನ್ನು ಒಲ್‌ಎಕ್ಸ್‌ನಲ್ಲಿ ಮಾರಟಕ್ಕೆ ಇಟ್ಟಿದ್ದರು. ಅವರಿಗೆ ಕರೆ ಮಾಡಿದ ವಂಚಕ ಮೊಹಮ್ಮದ್, ತಾನು ಬೈಕ್ ಕೊಳ್ಳುವುದಾಗಿ ತಿಳಿಸಿ ಏ.19ರಂದು ಹೆಬ್ಬಾಳಕ್ಕೆ ಬರುವಂತೆ ತಿಳಿಸಿದ್ದ. ಅವನ ಮಾತನ್ನು ನಂಬಿದ ಸನತ್‌ಕುಮಾರ್, ಬೈಕ್ ಸಮೇತ ಆಗಮಿಸಿದ್ದರು.
ಕನಕನಗರದಲ್ಲಿ ತನ್ನ ಮನೆ ಇದೆ ಎಂದು ಸುಳ್ಳು ಹೇಳಿ ಅವರನ್ನು ಕರೆದುಕೊಂಡು ಹೋದ ಮೊಹಮ್ಮದ್, ನಾಲ್ಕನೇ ಕ್ರಾಸ್‌ನಲ್ಲಿ ಬೈಕ್ ನಿಲ್ಲಿಸಿ ರಸ್ತೆಯ ಸಮೀಪವಿರುವ ಮನೆಯನ್ನು ತೋರಿಸಿ ಇದೇ ನನ್ನ ಮನೆ ಎಂದು ಹೇಳಿ ನಂಬಿಸಿದ್ದ. ಬೈಕ್ ಅನ್ನು ನಮ್ಮ ಪೋಷಕರಿಗೆ ತೋರಿಸುತ್ತೇನೆ ಎಂದು ಬೈಕ್‌ನ ದಾಖಲೆಗಳನ್ನು ಪಡೆದು ಮನೆಯ ಬಳಿ ಹೋಗಿ ಬರುತ್ತೇನೆ ಎಂದು ಹೇಳಿ ಬೈಕ್ ಹತ್ತಿ ಹೋದವನು ವಾಪಸ್ ಬಂದಿರಲಿಲ್ಲ.
ಇದರಿಂದ ಕಂಗಾಲಾದ ಸನತ್‌ಕುಮಾರ್ ವಂಚಕ ತೋರಿಸಿದ ಮನೆ ಬಳಿ ಹೋಗಿ ಕೇಳಿದಾಗ ಮೊಹಮ್ಮದ್ ಎಂಬ ವ್ಯಕ್ತಿ ಈ ಮನೆಯವನಲ್ಲ ಎಂದು ತಿಳಿಸಿದ್ದರು. ಜತೆಗೆ, ಮೊಹಮ್ಮದ್ ಕೂಡ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ತಾನು ಮೋದ ಹೋದ ಬಗ್ಗೆ ಎಚ್ಚೆತ್ತ ಸನತ್‌ಕುಮಾರ್, ಪೊಲೀಸರಿಗೆ ದೂರು ನೀಡಿದ್ದರು.
ಈ ದೂರು ಆಧರಿಸಿ ತನಿಖೆ ನಡೆಸುತ್ತಿದ್ದ ಇನ್ಸ್‌ಪೆಕ್ಟರ್ ಆರ್.ಎಸ್.ಟಿ.ಖಾನ್, ಪಿಎಸ್‌ಐ ರಾಜೇಶ್ ನೇತೃತ್ವದ ತಂಡ ಆರೋಪಿ ಮೊಹಮ್ಮದ್‌ನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ, ಆತ ಹೆಬ್ಬಾಳ, ಬಾಣಸವಾಡಿ, ಕೊತ್ತನೂರು, ಮಾರತ್‌ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಇದೇ ಮಾದರಿಯಲ್ಲಿ ನಾಲ್ಕು ಬೈಕ್ ಕಳವು ಮಾಡಿದ್ದ ಪ್ರಕರಣಗಳ ಬಗ್ಗೆ ಬಾಯ್ಬಿಟ್ಟಿದ್ದಾನೆ ಎಂದು ಅಧಿಕಾರಿ ಮಾಹಿತಿ ನೀಡಿದರು.