ವಿಜಯಪುರ: ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಅಕ್ರಮವಾಗಿ ಕೋಳಿ ಮಾಂಸದ ಊಟದಲ್ಲಿ ಗಾಂಜಾ ಸಾಗಾಟ ಮಾಡಲು ಯತ್ನಿಸಿದ ಘಟನೆ ವರದಿಯಾಗಿದೆ.
ಜೈಲಿನ ಕೈದಿಗೆ ಕೋಳಿ ಮಾಂಸದ ಊಟ ಸಾಗಿಸುವ ವೇಳೆಯಲ್ಲಿ ಪರಿಶೀಲನೆ ಮಾಡುವಾಗ ಕೋಳಿ ಮಾಂಸದಲ್ಲಿ ಗಾಂಜಾ ಸಾಗಿಸುವುದು ಬೆಳಕಿಗೆ ಬಂದಿದೆ. ಕೋಳಿ ಮಾಂಸದಲ್ಲಿ ಗಾಂಜಾ ಸಾಗಿಸುವಾಗ ಸಿಕ್ಕಿಬಿದ್ದವನನ್ನು ಪ್ರಜ್ವಲ್ ಲಕ್ಷ್ಮಣ ಮಾಬರುಖಾನೆ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ನಾಗರಹಾವಿನಿಂದ ಮಗನನ್ನು ರಕ್ಷಿಸಿದ ತಾಯಿ: ವಿಡಿಯೋ ವೈರಲ್
ಈತ ಜೈಲಿನಲ್ಲಿರುವ ಕೈದಿ ಶಾರುಖ್ ಖಾನ್ ತೆಗರತಿಪ್ಪಿ ಎಂಬ ಆರೋಪಿಗೆ ಕೋಳಿ ಮಾಂಸದಲ್ಲಿ ಗಾಂಜಾ ಸಾಗಿಸುತ್ತಿದ್ದ. ಕೋಳಿ ಮಾಂಸದ ದೊಡ್ಡ ದೊಡ್ಡ ತುಂಡುಗಳಲ್ಲಿ ಎಲುಬುಗಳನ್ನು ಪ್ರತ್ಯೆಕಿಸಿ ಅದರಲ್ಲಿ 2 ಗ್ರಾಂನಷ್ಟು ಗಾಂಜಾ ಇರಿಸಿ, ದಾರದಿಂದ ಹೊಲಿಯಲಾಗಿತ್ತು.
18 ಪ್ಯಾಕೆಟ್ ಗಾಂಜಾ ವಶಕ್ಕೆ ಪಡೆದಿರುವ ಜೈಲು ಅಧಿಕಾರಿಗಳು, ಆದರ್ಶ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿದ್ದಾರೆ.