ಬೆಂಗಳೂರು: ಸ್ಪಾ ಮಾಲೀಕನೊಬ್ಬನಿಗೆ ಬೆದರಿಕೆ ಹಾಕಿ ಸುಲಿಗೆ (Extortion) ಮಾಡಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ನಿರೂಪಕಿ ದಿವ್ಯ (Divya Vasanth) ವಸಂತರನ್ನು ಕೇರಳದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಇಂದಿರಾನಗರದಲ್ಲಿರುವ ಸ್ಪಾ ಮಾಲೀಕನೊಬ್ಬನಿಗೆ ಬೆದರಿಕೆ ಹಾಗೂ ಬ್ಲ್ಯಾಕ್ ಮೇಲ್ ಮಾಡಿ ಅವರಿಂದ 15 ಲಕ್ಷ ರೂ. ಸುಲಿಗೆಗೆ ಯತ್ನಿಸಿದ ಪ್ರಕರಣದಲ್ಲಿ ದಿವ್ಯ ವಸಂತ್ ರನ್ನು ಜೀವನ್ ಭೀಮಾನಗರ ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಪ್ರಕರಣದಲ್ಲಿ ಈಗಾಗಲೇ ಖಾಸಗಿ ಸುದ್ದಿ ವಾಹಿನಿಯ ಕಾರ್ಯನಿರ್ವಾಹಕರಾಗಿದ್ದ ರಾಜಾನುಕುಂಟೆ ವೆಂಕಟೇಶ್, ದಿವ್ಯ ತಮ್ಮ ಸಂದೇಶ್ ರನ್ನು ಬಂಧಿಸಲಾಗಿದೆ.
ಪ್ರಕರಣದ ಹಿನ್ನೆಲೆ: ದಿವ್ಯ ವಸಂತ್ ಹಾಗೂ ತಂಡ ಸೇರಿಕೊಂಡು ವ್ಯಾಟ್ಸಾಪ್ ನಲ್ಲಿ ʼಸ್ಪೈ ರಿಸರ್ಚ್ ಟೀಂ’ ಹೆಸರಿನ ಗ್ರೂಪ್ ನ್ನು ಮಾಡಿಕೊಂಡಿದ್ದರು. ಇದರಲ್ಲಿ ಹಣವುಳ್ಳ ಸಿರಿವಂತರನ್ನು ಗುರಿಯಾಗಿಸಿಕೊಂಡು ಅವರನ್ನು ಬ್ಲ್ಯಾಕ್ ಮೇಲ್(Black mail) ಅವರಿಂದ ಸುಲಿಗೆ ಮಾಡುವುದು ಹೇಗೆನ್ನುವ ಯೋಜನೆಯ ಬಗ್ಗೆ ಚರ್ಚೆ ನಡೆಯುತ್ತಿತ್ತು.
ಇಂದಿರಾನಗರದ ‘ಸ್ಪಾ’ ವೊಂದಕ್ಕೆ ವೆಂಕಟೇಶ್ ಹಾಗೂ ದಿವ್ಯಾ ತಂಡ ಈಶಾನ್ಯ ರಾಜ್ಯದ ಯುವತಿಯನ್ನು ಕೆಲಸಕ್ಕೆ ಸೇರಿಸಿದ್ದರು. ಈ ಸ್ಪಾಗೆ ಗ್ರಾಹಕನಂತೆ ದಿವ್ಯ ಸಹೋದರ ಸಂದೇಶ ರಹಸ್ಯ ಕ್ಯಾಮೆರಾವೊಂದನ್ನು ಹಿಡಿದುಕೊಂಡು ಮಸಾಜ್ ಗೆಂದು ಹೋಗಿದ್ದ. ಆ ಬಳಿಕ ಅದೇ ಯುವತಿಯೊಂದಿಗೆ ಸಲುಗೆಯಿಂದ ಇರುವ ವಿಡಿಯೋವೊಂದನ್ನು ರೆಕಾರ್ಡ್ ಮಾಡಿದ್ದ. ಇದನ್ನು ಸ್ಪಾ ಮಾಲೀಕನಿಗೆ ಕಳುಹಿಸಿ ನಿಮ್ಮ ಸ್ಪಾದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಇದನ್ನು ಟಿವಿಯಲ್ಲಿ ಪ್ರಸಾರ ಮಾಡುತ್ತೇವೆ ಎಂದು ಬೆದರಿಸಿದ್ದರು. 15 ಲಕ್ಷ ರೂ. ಕೊಡಿ ಇಲ್ಲದಿದ್ರೆ ನೇರ ಟಿವಿಯಲ್ಲಿ ಈ ದೃಶ್ಯವನ್ನು ಪ್ರಸಾರ ಮಾಡುತ್ತೇವೆ ಎಂದು ಬೆದರಿಕೆ ಹಾಕಿ ಸುಲಿಗೆಗೆ ಯತ್ನಿಸಿದ್ದರು.
ಇವರ ಸುಲಿಗೆಯ ಬಲೆಗೆ ಬಿದ್ದ ʼಸ್ಪಾʼ ಮಾಲೀಕನಿಂದ ಗ್ಯಾಂಗ್ 1 ಲಕ್ಷ ರೂ. ಸುಲಿಗೆ ಮಾಡಿದ್ದು, ಈ ಸಂಬಂಧ ಸ್ಪಾ ಮಾಲೀಕ ದೂರಿನ ಮೇರೆಗೆ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡು ವೆಂಕಟೇಶ್ ಹಾಗೂ ಸಂದೇಶ್ ಅವರನ್ನು ಬಂಧಿಸಿದ್ದರು.
ಇದಾದ ಬಳಿಕ ಪ್ರಕರಣದ ಮತ್ತೊಂದು ಆರೋಪಿ ದಿವ್ಯ ವಸಂತ್ ಅವರನ್ನು ಪೊಲೀಸರು ಹುಡುಕಲು ಶುರು ಮಾಡಿದ್ದರು. ಆದರೆ ದಿವ್ಯ ಪರಾರಿ ಆಗಿದ್ದರು. ತಮಿಳುನಾಡಿನಿಂದ, ಕೇರಳಕ್ಕೆ ಹೋಗಿರುವ ಮಾಹಿತಿ ಪಡೆದ ಪೊಲೀಸರು ಕೇರಳದಲ್ಲಿ ದಿವ್ಯರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.
ದಿವ್ಯ & ಟೀಮ್ 100ಕ್ಕೂ ಅಧಿಕ ಮಂದಿಗೆ ಈ ರೀತಿ ಸುಲಿಗೆ ಮಾಡಿ ಹಣ ಲೂಟಿದೆ ಎನ್ನಲಾಗಿದೆ.
ಖಾಸಗಿ ಟಿವಿ ವಾಹಿನಿಯಲ್ಲಿ ನಿರೂಪಕಿಯಾಗಿದ್ದ ದಿವ್ಯ ವಸಂತ ʼಇಡೀ ರಾಜ್ಯವೇ ಖುಷಿ ಪಡುವ ಸುದ್ದಿʼ ಎಂದೇಳಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಳು. ʼಗಿಚ್ಚಿ ಗಿಲಿ ಗಿಲಿʼ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಳು.