Advertisement

ಭ್ರಷ್ಟಾಚಾರ ಕೇಸ್‌ : ಷರೀಫ್ ವಿರುದ್ಧ ಅರೆಸ್ಟ್‌ ವಾರೆಂಟ್‌ ಜಾರಿ

04:27 PM Oct 26, 2017 | udayavani editorial |

ಇಸ್ಲಾಮಾಬಾದ್‌ : ಪನಾಮಾ ಪೇಪರ್‌ ಲೀಕ್‌ ಮೂಲಕ ಬಹಿರಂಗವಾದ ಎರಡು ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿ ಪದಚ್ಯುತ ಪ್ರಧಾನಿ ನವಾಜ್‌ ಷರೀಫ್ ವಿರುದ್ಧ ಪಾಕಿಸ್ಥಾನದ ನ್ಯಾಯಾಲಯವೊಂದು ಅರೆಸ್ಟ್‌ ವಾರೆಂಟ್‌ ಜಾರಿ ಮಾಡಿದೆ.

Advertisement

ಷರೀಫ್ ಅವರು ಪ್ರಕೃತ ಲಂಡನ್‌ನಲ್ಲಿ ಕ್ಯಾನ್ಸರ್‌ ಚಿಕಿತ್ಸೆ ಪಡೆಯುತ್ತಿರುವ ಪತ್ನಿ ಕುಲ್‌ಸೂಮ್‌ ಜತೆಗಿದ್ದಾರೆ. ಈ ತಿಂಗಳ ಆದಿಯಲ್ಲಿ ಎರಡು ಭ್ರಷ್ಟಾಚಾರ ಪ್ರಕರಣಗಳಲ್ಲಿ ಷರೀಫ್ ಅಪರಾಧಿ ಎಂದು ಕೋರ್ಟ್‌ ಹೇಳಿದಂದಿನಿಂದ ಈ ತನಕವೂ ಅವರು ದೇಶಕ್ಕೆ ಮರಳಿಲ್ಲ. ಷರೀಫ್ ಶೀಘ್ರವೇ ದೇಶಕ್ಕೆ ಮರಳುವರೆಂಬ ಸುದ್ದಿ ಈ ಹಿಂದೆ ದಟ್ಟವಾಗಿತ್ತು. 

ನವಾಜ್‌ ಷರೀಫ್ ವಿರುದ್ಧ ಇಂದು ಗುರುವಾರ ಪಾಕಿಸ್ಥಾನದ ಉತ್ತರದಾಯೀ ನ್ಯಾಯಾಲಯ ಜಾಮೀನು ಪಡೆಯಬಹುದಾದ ಅರೆಸ್ಟ್‌ ವಾರೆಂಟ್‌ ಹೊರಡಿಸಿದ್ದು ಮುಂದಿನ ವಿಚಾರಣೆಯನ್ನು ನವೆಂಬರ್‌ 3ಕ್ಕೆ ನಿಗದಿಸಿದೆ ಎಂದು ಷರೀಫ್ ಅವರ ಡಿಫೆನ್ಸ್‌ ವಕೀಲರಾಗಿರುವ ಝಾಫೀರ್‌ ಖಾನ್‌ ಮಾಧ್ಯಮಕ್ಕೆ ತಿಳಿಸಿದರು. 

ಈ ವರ್ಷ ಜುಲೈ ತಿಂಗಳಲ್ಲಿ ಪಾಕ್‌ ಸುಪ್ರೀಂ ಕೋರ್ಟ್‌, ಭ್ರಷ್ಟಾಚಾರದ ಆರೋಪಗಳ ಮೇಲೆ ಪ್ರಧಾನಿ ನವಾಜ್‌ ಷರೀಫ್ ಅವರನ್ನು ಹುದ್ದೆಯಿಂದ ವಜಾ ಮಾಡಿತ್ತಲ್ಲದೆ ಅವರ ಕುಟುಂಬ ಸದಸ್ಯರ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ತನಿಖೆಗೆ ಆದೇಶಿಸಿತ್ತು. ಅದರೊಂದಿಗೆ, ಎಪ್ಪತ್ತು ವರ್ಷಗಳ ಪಾಕ್‌ ಇತಿಹಾಸದಲ್ಲಿ ತಮ್ಮ ಅಧಿಕಾರಾವಧಿ ಪೂರ್ಣಗೊಳಿಸುವ ಮುನ್ನವೇ ಪದಚ್ಯುತರಾದ ಪಾಕಿಸ್ಥಾನದ 15ನೇ ಪ್ರಧಾನಿ ಎಂಬ ಕುಖ್ಯಾತಿಗೆ ಷರೀಫ್ ಗುರಿಯಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next