ಕಾಠ್ಮಂಡು: ನೇಪಾಳ ಕ್ರಿಕೆಟ್ ತಂಡದ ನಾಯಕ ಸಂದೀಪ್ ಲಮಿಚಾನೆ ಅವರು ಅತ್ಯಾಚಾರ ಆರೋಪ ಎದುರಿಸುತ್ತಿದ್ದಾರೆ. 17 ವರ್ಷದ ಹುಡುಗಿಯನ್ನು ಅತ್ಯಾಚಾರಗೈದ ಆರೋಪ ಎದುರಿಸುತ್ತಿರುವ ಸಂದೀಪ್ ಬಂಧನಕ್ಕೆ ನ್ಯಾಯಾಲಯ ವಾರಂಟ್ ಜಾರಿ ಮಾಡಿದೆ. ಸಂದೀಪ್ ಸದ್ಯ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ನಲ್ಲಿ ಆಡುತ್ತಿದ್ದಾರೆ.
ಶುಕ್ರವಾರ ಈ ಬಗ್ಗೆ ಪೋಸ್ಟ್ ಮಾಡಿರುವ ಸಂದೀಪ್, ಈ ಆರೋಪವನ್ನು ಅಲ್ಲಗಳೆದಿದ್ದಾರೆ. ಹದಿಹರೆಯದ ಹುಡುಗಿಯೊಬ್ಬಳು ತನ್ನ ಪೋಷಕರೊಂದಿಗೆ ಈ ವಾರದ ಆರಂಭದಲ್ಲಿ ಸಂದೀಪ್ ವಿರುದ್ಧ ದೂರು ದಾಖಲಿಸಿದ್ದಾರೆ. ಕಳೆದ ತಿಂಗಳು ಕಾಠ್ಮಂಡುವಿನಲ್ಲಿ ಭೇಟಿಯಾದ ಬಳಿಕ ಹೋಟೆಲ್ ಕೋಣೆಯಲ್ಲಿ ಸಂದೀಪ್ ಲಮಿಚಾನೆ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿದ್ದಾರೆ.
“ನಾನು ಅಮಾಯಕ. ನಾನು ನೇಪಾಳದ ಕಾನೂನಿನ ಬಗ್ಗೆ ನಂಬಿಕೆ ಹೊಂದಿದ್ದೇನೆ. ಆದಷ್ಟು ಬೇಗ ಸಿಪಿಎಲ್ ನಿಂದ ತವರಿಗೆ ಬರುತ್ತೇನೆ” ಎಂದು ಸಂದೀಪ್ ಲಮಿಚಾನೆ ಹೇಳಿದ್ದಾರೆ.
ಇದನ್ನೂ ಓದಿ:ಒಂದು ಲಡ್ಡು ಬೆಲೆ 24.60 ಲಕ್ಷ ರೂ!: ದಾಖಲೆ ಬರೆದ ಬಾಲಾಪುರ ಗಣೇಶನ ಪ್ರಸಾದ
ಲಮಿಚಾನೆ ಪ್ರಸ್ತುತ ವೆಸ್ಟ್ ಇಂಡೀಸ್ ನಾದ್ಯಂತ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್ ನಲ್ಲಿ ಜಮೈಕಾ ತಲ್ಲವಾಸ್ ಪರ ಆಡುತ್ತಿದ್ದಾರೆ.
2018 ರಲ್ಲಿ ಏಕದಿನ ಅಂತಾರಾಷ್ಟ್ರೀಯ ಸ್ಥಾನಮಾನವನ್ನು ಗಳಿಸಿದ ನೇಪಾಳ ಕ್ರಿಕೆಟ್ ನ ಪೋಸ್ಟರ್ ಬಾಯ್ ಆಗಿ ಸಂದೀಪ್ ಮಿಂಚಿದ್ದಾರೆ. ಸಂದೀಪ್ ಲಮಿಚಾನೆ ಐಪಿಎಲ್ ನಲ್ಲಿ ಕೂಡಾ ಆಡಿದ್ದಾರೆ.