ಬೆಂಗಳೂರು: ಮನೆ ಕಳವು ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿ ರುವ ರಾಜಗೋಪಾಲನಗರ ಠಾಣೆ ಪೊಲೀಸರು, 7 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
ರಾಜಾಜಿನಗರದ ಮಣಿಕಂಠ, ಸಂಜಯ್ ಬಂಧಿತರು.
7.5 ಲಕ್ಷ ಬೆಲೆ ಬಾಳುವ 121 ಗ್ರಾಂ ಚಿನ್ನಾಭರಣ, 1 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ್ದ 1 ಕಬ್ಬಿಣದ ರಾಡನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 2023ರ ಡಿ.12ರಂದು ಆರೋಪಿಗಳು ಸಹಚರರ ಜತೆಗೆ ಸೇರಿಕೊಂಡು ರಾಜಗೋಪಾಲನಗರ ಪೊಲೀಸ್ ವ್ಯಾಪ್ತಿಯ ಲಗ್ಗೆರೆಯ ಮನೆಯೊಂದಕ್ಕೆ ಕನ್ನ ಹಾಕಿದ್ದರು.
ಮನೆ ಮಾಲೀಕರು ಅದೇ ದಿನ ಸಂಜೆ ಕೆಲಸ ಮುಗಿಸಿಕೊಂಡು ಮನೆಯ ಬಳಿ ಬಂದು ನೋಡಲಾಗಿ, ಮನೆಯ ಬಾಗಿಲ ಬೀಗ ಮುರಿದು, ಬೀರುವಿನಲ್ಲಿದ್ದ ಚಿನ್ನಾಭರಣಗಳು ಕಳವು ಮಾಡಿಕೊಂಡು ಹೋಗಿರು ವುದು ಗೊತ್ತಾಗಿದೆ. ಈ ಬಗ್ಗೆ ರಾಜಗೋಪಾಲನಗರ ಪೊಲೀಸರು ತನಿಖೆ ಕೈಗೊಂಡು ಕೃತ್ಯದಲ್ಲಿ ಭಾಗಿಯಾಗಿದ್ದ 6 ಕಳ್ಳರ ಪೈಕಿ ನಾಲ್ವರನ್ನು ಡಿ.18ರಂದು ಬಂಧಿಸಿ 12 ಲಕ್ಷ ರೂ. ಬೆಲೆ ಬಾಳುವ 254 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದರು.
ಆದರೆ, ಮಣಿಕಂಠ, ಸಂಜಯ್ ತಲೆಮರೆಸಿ ಕೊಂಡಿದ್ದರು. ಇತ್ತೀಚೆಗೆ ಈ ಇಬ್ಬರನ್ನು ಪತ್ತೆಹಚ್ಚಿ ಬಂಧಿಸಿದ ಪೊಲೀಸರು 7 ಲಕ್ಷ ರೂ. ವಶಕ್ಕೆ ಪಡೆದಿದ್ದಾರೆ. ಪ್ರಮುಖ ಆರೋಪಿ ಮಣಿಕಂಠ ರಾಜ ಗೋಪಾಲ ನಗರ ಪೊಲೀಸ್ ಠಾಣೆಯ ರೌಡಿಯಾಗಿದ್ದಾನೆ. ಮಹಾ ಲಕ್ಷ್ಮೀಲೇಔಟ್, ಪೀಣ್ಯ, ಬ್ಯಾಡರಹಳ್ಳಿ, ಗಂಗಮ್ಮಗುಡಿ, ರಾಜ ಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಕನ್ನ ಕಳವು, ಮನೆ ಕಳವು, ದೊಂಬಿ, ಶಸ್ತ್ರಾಸ್ತ್ರ ಕಾಯ್ದೆಯಡಿನ ಪ್ರಕರಣ ಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿದ್ದ.