Advertisement

Bandipur : ಕಾಡು ಹಂದಿ ಮಾಂಸ ಸುಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

03:17 PM Jul 10, 2023 | Team Udayavani |

ಗುಂಡ್ಲುಪೇಟೆ(ಚಾಮರಾಜನಗರ): ವಿದ್ಯುತ್ ಸಂಪರ್ಕಕ್ಕೆ ಸಿಲುಕಿ ಮೃತಪಟ್ಟಿದ್ದ ಕಾಡು ಹಂದಿಯ ಮಾಂಸ ಸುಡುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿರುವ ಘಟನೆ ತಾಲೂಕಿನ ಬಂಡೀಪುರ ಹುಲಿ ಯೋಜನೆ ಗುಂಡ್ಲುಪೇಟೆ ಉಪ ವಿಭಾಗದ ಮದ್ದೂರು ವಲಯದ ಚೆನ್ನಮಲ್ಲಿಪುರ ಗ್ರಾಮದ ಜಾಕೋಬ್ ಫಾರಂನಲ್ಲಿ ನಡೆದಿದೆ.

Advertisement

ಕೇರಳ ಮೂಲದ ಎಂ.ವಿ.ಥಾಮಸ್ ಹಾಗೂ ಶಿಜು ಜಾಕೋಬ್ ಬಂಧಿತ ಆರೋಪಿಗಳು.

ಈ ಇಬ್ಬರು ಚೆನ್ನಮಲ್ಲಿಪುರ ಗ್ರಾಮದ ಜಾಕೋಬ್ ಅವರ ಜಮೀನಿನಲ್ಲಿ ಕಾಡು ಹಂದಿಯ ಮಾಂಸ ಸುಡುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾಡು ಹಂದಿ ಮಾಂಸದ ಸಮೇತ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ತನಿಖೆ ವೇಳೆ ಚೆನ್ನಮಲ್ಲಿಪುರ ಗ್ರಾಮದ ಬಸಪ್ಪ/ದೊಡ್ಡಬಸಪ್ಪ ಎಂಬವರ ಜಮೀನಿನಲ್ಲಿ ಅಕ್ರಮವಾಗಿ ಕಲ್ಪಿಸಿದ್ದ ವಿದ್ಯುತ್ ಸಂಪರ್ಕಕ್ಕೆ ಸಿಲುಕಿ ಮೃತಪಟ್ಟಿದ್ದ ಕಾಡು ಹಂದಿಯನ್ನು ಜಮೀನು ಮಾಲೀಕರು ಮಾಂಸಕ್ಕಾಗಿ ನಮಗೆ ನೀಡಿದ್ದು, ನಾವು ಗುತ್ತಿಗೆ ಮಾಡುತ್ತಿದ್ದ ಜಮೀನಿನಲ್ಲಿ ಕಾಡು ಹಂದಿ ಮಾಂಸ ಸುಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.

ಇಬ್ಬರು ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972, ಸೆಕ್ಷನ್ 9, 39,58 ಆರ್/ಡ್ಲ್ಯೂ 2/16ಸಿ, 2/36, 51, 55ರ ಪ್ರಕಾರ ಪ್ರಕರಣ ದಾಖಲಿಸಲಾಗಿದ್ದು, ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Advertisement

ಜಮೀನು ಮಾಲೀಕ ಬಸಪ್ಪ/ದೊಡ್ಡಬಸಪ್ಪ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಕ್ರಮ ಕೈಗೊಳ್ಳಲಾಗಿದೆ.

ದಾಳಿಯಲ್ಲಿ ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ರವೀಂದ್ರ, ಮದ್ದೂರು ವಲಯದ ವಲಯ ಅರಣ್ಯಾಧಿಕಾರಿ ಬಿ.ಎಂ.ಮಲ್ಲೇಶ್, ಪ್ರವೀಣ್ ಹಂಚಿನಾಳ್, ಉಪ ವಲಯ ಅರಣ್ಯಾಧಿಕಾರಿ, ಗಸ್ತು ವನಪಾಲಕರಾದ ದೇವಿಂದ್ರ ಯರಗಲ್ಲ, ನವೀನ ಹಾಗೂ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next