Advertisement

ಬಿಹಾರ ಸಿಎಂ ವಿರುದ್ಧ ಫ್ಲೆಕ್ಸ್‌ ಹಾಕಿದ್ದ ಮೂವರ ಸೆರೆ

02:37 PM Jul 23, 2023 | Team Udayavani |

ಬೆಂಗಳೂರು: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ವಿರುದ್ಧ ಅವಹೇಳನಕಾರಿ ಫ್ಲೆಕ್ಸ್‌ಗಳನ್ನು ಹಾಕಿದ್ದ ಆರೋಪದ ಮೇಲೆ ಮೂವರು ಆರೋಪಿಗಳನ್ನು ಹೈಗ್ರೌಂಡ್ಸ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಶೇಷಾದ್ರಿಪುರಂ ನಿವಾಸಿ ಶ್ರೀರಾಮ್‌ (48), ಕೆ.ಮೋಹನ್‌(42), ಮತ್ತು ನಂದಕುಮಾರ್‌(30) ಬಂಧಿತರು. ಇತ್ತೀಚೆಗೆ ನಗರದ ತಾಜ್‌ವೆಸ್ಟೆಂಡ್‌ ಹೋಟೆಲ್‌ನಲ್ಲಿ “ಇಂಡಿಯಾ’ ವಿಪಕ್ಷ ಸಭೆಯನ್ನು ಕಾಂಗ್ರೆಸ್‌ ಕರೆದಿತ್ತು. ಈ ಸಭೆಗೆ ಭಾಗವಹಿಸಲು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸೇರಿ ವಿವಿಧ ಪಕ್ಷಗಳ ಮುಖಂಡರು ಆಗಮಿಸಿದ್ದರು. ಈ ವೇಳೆ ಟ್ರೀ ಲೈಟ್‌ ಜಂಕ್ಷನ್‌ನಲ್ಲಿ ಹರೇಕೃಷ್ಣ ರಸ್ತೆಯಲ್ಲಿನ ಕರ್ನಾಟಕ ಫಿಲಂ ಚೇಂಬರ್‌ ಮುಂಭಾಗದ ರಸ್ತೆಯಲ್ಲಿ ನಂತರ ಚಾಲುಕ್ಯ ಸರ್ಕಲ್‌ನ ಹೈಪಾಯಿಂಟ್‌ ಕಟ್ಟಡದ ಮುಂಭಾಗ ಹಾಗೂ ಇತರೆಡೆ ಅಳವಡಿಸಿದ್ದ ಫ್ಲೆಕ್ಸ್‌ಗಳಲ್ಲಿ ಬಿಹಾರ ಸಿಎಂ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ವಿರುದ್ಧ “ಅಸ್ಥಿರ ಪ್ರಧಾನಿ ಅಭ್ಯರ್ಥಿ’ ಎಂದು ಪ್ರಚೋದನಾಕಾರಿ ಫ್ಲೆಕ್ಸ್‌ಗಳನ್ನು ಹಾಕಲಾಗಿತ್ತು. ರಾತ್ರೋರಾತ್ರಿ ಇದೇ ರೀತಿ ಸುಮಾರು 30ಕ್ಕೂ ಹೆಚ್ಚು ಫ್ಲೆಕ್ಸ್‌ಗಳನ್ನು ಅಳವಡಿಸಿದ್ದರು. ಅದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಹಾಗೂ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಉದ್ದೇಶ ಆರೋಪಿಗಳದಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿ ಶ್ರೀರಾಮ್‌ ಪ್ರಚೋದನಾಕಾರಿ ಫ್ಲೆಕ್ಸ್‌ ಹಾಕಲು ಹಣ ಸಂಗ್ರಹಿಸಿದ್ದ. ನಂದಕುಮಾರ್‌ನ ಪ್ರಿಂಟಿಂಗ್‌ ಪ್ರಸ್‌ನಲ್ಲಿ ಫ್ಲೆಕ್ಸ್‌ಗಳನ್ನು ಮುದ್ರಿಸಲಾಗಿತ್ತು. ಮೋಹನ್‌ಗೆ ಸೇರಿದ ಮಿನಿ ಟೆಂಪೋದಲ್ಲಿ ಫ್ಲೆಕ್ಸ್‌ಗಳನ್ನು ಸಾಗಿಸಲಾಗಿತ್ತು. ಆರೋಪಿಗಳು ರಾಜಕೀಯ ಮುಖಂಡರೊಬ್ಬರ ಕುಮ್ಮಕ್ಕುನಿಂದ ಮಾಡಿರುವ ಸಾಧ್ಯತೆಯಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು. ಹೈಗ್ರೌಂಡ್ಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next