ಬೆಂಗಳೂರು: ಬೆಂಗಳೂರು ಬಂದ್ ದಿನ ಹೋಟೆಲ್‌ಗಳಿಗೆ ನುಗ್ಗಿ ದಾಂಧಲೆ ನಡೆಸಿದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜಯನಗರ ನಿವಾಸಿಗಳಾದ ಯೋಗೇಶ್(32) ಮತ್ತು ಸೋಮಶೇಖರ್ ರೆಡ್ಡಿ (30) ಬಂಧಿತರು.
ಕೃತ್ಯದಲ್ಲಿ ಭಾಗಿಯಾಗಿದ್ದ ಶಿವು ಮತ್ತು ವಿಷ್ಣು ಸೇರಿ ಇತರೆ ಆರೇಳು ಮಂದಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಆರೋಪಿಗಳು ಸೆ.26ರಂದು ಜಯನಗರದ 2-3 ಹೋಟೆಲ್‌ಗಳಿಗೆ ನುಗ್ಗಿ ದಾಂಧಲೆ ನಡೆಸಿದ್ದರು ಎಂದು ಪೊಲೀಸರು ಹೇಳಿದರು.
ಸೆ.26ರಂದು ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿತ್ತು. ಅದೇ ದಿನ ಸಂಜೆ ಜಯನಗರದಲ್ಲಿ 2-3 ಹೋಟೆಲ್‌ಗಳು ತೆರೆದು ಗ್ರಾಹಕರಿಗೆ ಆಹಾರ ಪೂರೈಕೆ ಮಾಡುತ್ತಿದ್ದವು.
ಅದೇ ವೇಳೆ ಹೋಟೆಲ್‌ಗೆ ನುಗ್ಗಿದ್ದ ಆರೋಪಿಗಳು, ಪೀಠೊಪಕರಣಗಳು, ಆಹಾರ ಪದಾರ್ಧ, ಗಾಜುಗಳನ್ನು ಹೊಡೆದು ಧ್ವಂಸಗೊಳಿಸಿದ್ದರು.ಅಲ್ಲದೆ, ಗ್ರಾಹಕರನ್ನು ಹೋಟೆಲ್‌ನಿಂದ ಹೊರಗಡೆ ಕಳುಹಿಸಿದ್ದರು.
ಈ ಸಂಬಂಧ ಹೋಟೆಲ್‌ಗಳ ಮಾಲೀಕರು ದೂರು ನೀಡಿದ್ದರು. ಆ ಹಿನ್ನೆಲೆಯಲ್ಲಿ ಘಟನಾ ಸ್ಥಳದ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರು ಬಿಜೆಪಿ ಕಾರ್ಯಕರ್ತರು ಎನ್ನಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.