ಬೆಂಗಳೂರು: ಬಿಎಂಟಿಸಿ ಬಸ್‌ಗಳ ಪ್ರಯಾಣಿಕರನ್ನೇ ಟಾರ್ಗೆಟ್ ಮಾಡಿ ಕೊಂಡು ಮೊಬೈಲ್ ಸುಲಿಗೆ ಮಾಡು ತ್ತಿದ್ದ ಆಂಧ್ರಪ್ರದೇಶ ಮೂಲದ ಮೂವರು ಆರೋಪಿಗಳನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ನಾಗನೂರಿ ಕುಮಾರ್ (23), ಅನಂತಪುರ ಜಿಲ್ಲೆಯ ಪರಶುರಾಮ್ ಅಲಿಯಾಸ್ ಅಭಿ(21) ಮತ್ತು ಬಾಲಕ ನೊಬ್ಬನನ್ನು ಬಂಧಿಸಲಾಗಿದೆ. ಆರೋಪಿಗಳಿಂದ 22.40 ಲಕ್ಷ ರೂ. ಮೌಲ್ಯದ 176 ಮೊಬೈಲ್‌ಗಳು ಮತ್ತು 1 ಕಾರು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿಗಳು ಆಂಧ್ರಪ್ರದೇಶದಿಂದ ಕಾರಿನಲ್ಲಿ ನಗರದ ಹೊರವಲಯಕ್ಕೆ ಬರುತ್ತಿದ್ದರು. ಬಳಿಕ ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಅವರ ಜೇಬಿನಲ್ಲಿದ್ದ ಮೊಬೈಲ್ ಕದ್ದು ಪರಾರಿಯಾಗುತ್ತಿದ್ದರು. ಅದಕ್ಕಾಗಿ ಮೆಜೆಸ್ಟಿಕ್ ಹಾಗೂ ಹೆಚ್ಚು ಪ್ರಯಾಣಿಕರು ಇರುವ ಬಿಎಂಟಿಸಿ ಬಸ್ ಗಳು ಹಾಗೂ ನಿಲ್ದಾಣಗಳನ್ನು ಆಯ್ಕೆ ಮಾಡಿಕೊಂಡು ಕೃತ್ಯ ಎಸಗುತ್ತಿದ್ದರು ಎಂಬುದು ಗೊತ್ತಾಗಿದೆ.
ಇತ್ತೀಚೆಗೆ ಶಿವಮೊಗ್ಗದಿಂದ ರೈಲಿನಲ್ಲಿ ಮೆಜೆಸ್ಟಿಕ್‌ಗೆ ಬಂದು, ಬಳಿಕ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರ ಮೊಬೈಲ್ ಸುಲಿಗೆ ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರು ಕಳವು ಮಾಡಿದ ಮೊಬೈಲ್ ಗಳನ್ನು ಆಂಧ್ರಪ್ರದೇಶಕ್ಕೆ ಕೊಂಡೊಯ್ದು, ಫ್ಲ್ಯಾಶ್ ಮಾಡಿಸಿ ಕಡಿಮೆ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದರು.