ರಾಯಚೂರು: ಸಿನಿಮೀಯ ಶೈಲಿಯಲ್ಲಿ ಶನಿವಾರ ವ್ಯಕ್ತಿಯ ಅಪಹರಣ ನಡೆಸಿದ್ದ ಪ್ರಕರಣ ಸುಖಾಂತ್ಯ ಕಂಡಿದ್ದು, ಘಟನೆ ನಡೆದು 24 ಗಂಟೆಯೊಳಗೆ ರಾಯಚೂರು ಪೊಲೀಸರು ಪ್ರಕರಣ ಭೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಪಹರಣಕಾರರ ಬೆನ್ನಟ್ಟಿದ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ನೇತೃತ್ವದ ತಂಡ, ಸಿಂಧಗಿ ಮೂಲದ ನಾಲ್ವರು ಅಪಹರಕಾರರು ಸೇರಿ ಐವರನ್ನು ಬಂಧಿಸಿದೆ. ಚಂದನ ಸಾಬ್, ರಮೇಶ್, ಸಂತೋಷ್, ಮಿರಾಜ್ ಮತ್ತು ಶಬ್ಬೀರ ಬಂಧಿತ ಆರೋಪಿಗಳು.
ಮಸ್ಕಿ ತಾಲೂಕಿನ ಮಾರಲದಿನ್ನಿ ತಾಂಡಾ ಮೂಲದ ಶರಣಪ್ಪ ಎಂಬ ವ್ಯಕ್ತಿಯನ್ನ ಕಿಡ್ನ್ಯಾಪ್ ಮಾಡಿದ್ದರು.
ಶರಣಪ್ಪನ ದೊಡ್ಡಪ್ಪನ ಮಗ ಕಬ್ಬಿನ ಕಟಾವಿಗೆ ಕಾರ್ಮಿಕರನ್ನು ಕರೆ ತರುವುದಾಗಿ ಸಿಂಧಗಿ ಮೂಲದ ನಾಲ್ವರಿಂದ ಎಂಟು ಲಕ್ಷ ರೂ. ಪಡೆದಿದ್ದ. ಹಣ ಪಡೆಯುವಾಗ ಶರಣಪ್ಪ ಹಾಜರಿದ್ದ. ಶರಣಪ್ಪನ ದೊಡ್ಡಪ್ಪನ ಮಗ ಕಾರ್ಮಿಕರನ್ನು ಕರೆದೊಯ್ಯದೆ, ಹಣವೂ ವಾಪಸ್ ನೀಡದೆ ತಲೆ ಮರೆಸಿಕೊಂಡಿದ್ದ. ಹೀಗಾಗಿ ಶರಣಪ್ಪನನ್ನು ಶನಿವಾರ ಮಧ್ಯಾಹ್ನ ಲಿಂಗಸಗೂರನಲ್ಲಿ ಅಪಹರಿಸಲಾಗಿತ್ತು.
ಅಪಹರಣ ತಡೆಯಲು ಯತ್ನಿಸಿದ್ದ ಜನರಿಗೆ ಪಿಸ್ತೂಲ್ ತೋರಿಸಿದ್ದರಿಂದ ಸಾಕಷ್ಟು ಆತಂಕ ಸೃಷ್ಟಿಯಾಗಿತ್ತು.
ಘಟನೆ ನಡೆಯುತ್ತಿದ್ದಂತೆ ಎಎಸ್ಪಿ ಹರಿಬಾಬು ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ಬಗ್ಗೆ ಲಿಂಗಸಗೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.