ದಾವಣಗೆರೆ: ಬೆಳ್ಳಿ ಬಂಗಾರದ ಆಭರಣಗಳ ಪಾಲಿಶ್ ಮಾಡಿಕೊಡುವ ನೆಪದಲ್ಲಿ ಮಾಂಗಲ್ಯ ಸರ ಅಪಹರಿಸುತ್ತಿದ್ದ ಐವರು ಅಂತಾರಾಜ್ಯ ದರೋಡೆಕೋರರನ್ನು ದಾವಣಗೆರೆ ಗ್ರಾಮಾಂತರ ವಿಭಾಗದ ಹೊನ್ನಾಳಿ, ಹರಿಹರ ಪೊಲೀಸರು ಬಂಧಿಸಿ 30 ಲಕ್ಷ ರೂ. ಮೌಲ್ಯದ 1 ಕೆಜಿ ಬಂಗಾರದ ಆಭರಣ ವಶಪಡಿಸಿಕೊಂಡಿದ್ದಾರೆ.
ಬಿಹಾರ್‌ನ ಗೋವಿಂದಪುರದ ಸುಮೀತ್ ಕುಮಾರ್(24), ನಿರಂಜನ್ ಕುಮಾರ್ ಅಲಿಯಾಸ್ ನಿರಂಜನ್ ಗುಪ್ತ (22), ಭಜ್ರಾಹ ಬಜಾರ್ ಗ್ರಾಮದ ಮುಖೇಶ್ ಕುಮಾರ್, ಮಧುರಪುರ ಗ್ರಾಮದ ರಾಕೇಶ್(39), ಪರ್ವತಪುರ ಗ್ರಾಮದ ಸಂತೋಷ್ ಕುಮಾರ್ (29) ಬಂಧಿತರು.
ಈ ಪ್ರಕರಣದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಆರೋಪಿಗಳ ವಿರುದ್ಧ ದಾವಣಗೆರೆ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ 24 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಆರೋಪಿಗಳಿಂದ 30 ಲಕ್ಷ ಬೆಲೆ ಬಾಳುವ ಒಟ್ಟು 1,006 ಗ್ರಾಂ (1.6 ಕೆಜಿ) ತೂಕದ ಬಂಗಾರದ ಆಭರಣ ಹಾಗೂ 2 ಪಲ್ಸರ್ ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದರು.
ಕಳೆದ ಆ.25 ರಂದು ರಾತ್ರಿ ಹೊನ್ನಾಳಿ ತಾಲೂಕು ಕಮ್ಮಾರಗಟ್ಟೆ ಗ್ರಾಮದ ಹೊರವಲಯದ ಒಂಟಿ ಮನೆಗೆ 4 ರಿಂದ 5 ಜನರಿರುವ ದರೋಡೆಕೋರರ ತಂಡ ನುಗ್ಗಿತ್ತು. ಈ ಸಮಯದಲ್ಲಿ ಎಚ್ಚರಗೊಂಡ ಮನೆ ಮಾಲಿಕ ಗಂಗಾಧರಪ್ಪ ಕೊರಳಲಿದ್ದ ಬಂಗಾರದ ಚೈನ್ ಕಿತ್ತುಕೊಂಡು ಅವರನ್ನು ದೂಡಾಡಿ ಹೊಡೆಯುತ್ತಿರುವಾಗ ಮನೆಯಲ್ಲಿ ಮಲಗಿದ್ದ ಇನ್ನಿಬ್ಬರು ಕೆಲಸಗಾರರು ಗಂಗಾಧರಪ್ಪನ ಸಹಾಯಕ್ಕೆ ಓಡಿ ಬಂದರು. ಇದನ್ನು ಕಂಡ ನಾಲ್ಕು ಜನ ಡಕಾಯಿತರು ತಪ್ಪಿಸಿಕೊಂಡು ಬೈಕ್‌ಗಳಲ್ಲಿ ಪರಾರಿಯಾಗಿದ್ದರು. ಆದರೆ, ಒಬ್ಬ ಆರೋಪಿ ಸುಮೀತ್‌ಕುಮಾರ್‌ನನ್ನು ಹಿಡಿದು, ಹೊನ್ನಾಳಿ ಪೊಲೀಸರಿಗೆ ಒಪ್ಪಿಸಿದ್ದರು.
ಮಾಹಿತಿ ತಿಳಿದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಅಂದೇ ಉಳಿದ ನಾಲ್ಕು ಜನ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ನಡೆಸಿದಾಗ ಹೊನ್ನಾಳಿ, ನ್ಯಾಮತಿ, ಹರಿಹರ, ಹರಪನಹಳ್ಳಿ, ಅರಸಿಕೆರೆ, ಜಗಳೂರು, ದಾವಣಗೆರೆ ನಗರ, ಚಿತ್ರದುರ್ಗ, ತುಮಕೂರು ಜಿಲ್ಲೆಯ ಕ್ಯಾತ್ಸಂದ್ರ, ಚೇಳೂರು ಹಾಗೂ ವಿವಿಧ ಕಡೆಗಳಲ್ಲಿ ಬೆಳ್ಳಿ ಬಂಗಾರದ ಆಭರಣಗಳ ಪಾಲಿಶ್ ಮಾಡಿಕೊಡುವ ನೆಪದಲ್ಲಿ ಅಭರಣ ದೋಚಿರುವುದು, ಮಾಂಗಲ್ಯಸರ ಕಿತ್ತುಕೊಂಡು
ಪರಾರಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ತಿಳಿಸಿದರು.
ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಗ್ರಾಮಾಂತರ ವಿಭಾಗದ ಉಪಾಧೀಕ್ಷಕ ಎಂ.ಕೆ. ಗಂಗಲ್, ಹೊನ್ನಾಳಿ ವೃತ್ತ ನಿರೀಕ್ಷಕ ಜೆ. ರಮೇಶ್, ಹರಿಹರ ವೃತ್ತ ನಿರೀಕ್ಷಕ ಲಕ್ಷ್ಮಣನಾಯ್ಕ, ಪಿಎಸ್ ಐಗಳಾದ ಎಚ್.ಎಂ. ಸಿದ್ದೇಗೌಡ, ಎನ್.ಸಿ. ಕಾಡದೇವರ ಹನುಮಂತಪ್ಪ ಶಿರೆಹಳ್ಳಿ, ಸಿಬ್ಬಂದಿ ರಾಘವೇಂದ್ರ, ಮಜೀದ್, ರಮೇಶ್‌ನಾಯ್ಕ, ಶಾಚಿತರಾಜ್, ಮಹಮದ್ ಇಲಿಯಾಸ್, ರಾಮಚಂದ್ರ ಜಾಧವ್, ಫೈರೋಜ್ ಖಾನ್, ವೆಂಕಟರಮಣ, ಸೈಯದ್ ಗಫಾರ್, ಗಿರೀಶ್ ನಾಯ್ಕ, ಕೃಷ್ಣ, ವೆಂಕಟೇಶ್, ದೇವರಾಜ, ಮಂಜು, ನಾಗನಗೌಡ, ಕುಮಾರನಾಯ್ಕ, ಮಹೇಶ್ ಕುಮಾರ್‌ಗೆ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.