ಬೆಂಗಳೂರು: ಉತ್ತರ ಮತ್ತು ಪೂರ್ವ ವಿಭಾಗ ಪೊಲೀಸರ ಕಾರ್ಯಾಚರಣೆಯಲ್ಲಿ ನಗರದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಒಬ್ಬ ವಿದೇಶಿ ಪ್ರಜೆ ಸೇರಿ ಒಂಭತ್ತು ಮಂದಿಯನ್ನು ಬಂಧಿಸಲಾಗಿದೆ.
ಲಾಕ್‌ಡೌನ್ ಸಂದರ್ಭದಲ್ಲಿ ಕೆಲಸವಿಲ್ಲದ ಕಾರಣ ಜೀವನ ನಿರ್ವಹಣೆಗಾಗಿ ನೆರೆ ರಾಜ್ಯದಿಂದ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಆಟೋ ಚಾಲಕ ಸೇರಿ ಮೂವರು ಆರೋಪಿಗಳನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ.
ಭೂಪಸಂದ್ರದ ಹೊಸಬಡಾವಣೆ ನಿವಾಸಿ ಶಬ್ಬಿರ್‌ಖಾನ್ (34), ಆಂಧ್ರಪ್ರದೇಶದ ವಿಶಾಖ ಪಟ್ಟಣಂ ನಿವಾಸಿಗಳಾದ ಭೀಮಣ್ಣ (28) ಮತ್ತು ಎಸ್.ನನ್ನರಾವ್ (24) ಬಂಧಿತರು. ಅವರಿಂದ 9 ಲಕ್ಷ ರೂ. ಮೌಲ್ಯದ 30.23 ಕೆ.ಜಿ. ಗಾಂಜಾ ಮತ್ತು500 ರೂ. ನಗದುವಶಕ್ಕೆಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ಶಬ್ಬಿರ್ ಖಾನ್ ನಗರದಲ್ಲಿ ಆಟೋ ಚಾಲಕನಾಗಿದ್ದು, ಲಾಕ್‌ಡೌನ್ ಸಂದರ್ಭದಲ್ಲಿ ಕೆಲಸ ಇಲ್ಲದೆ ಜೀವನನಿ ರ್ವಹಣೆ ಕಷ್ಟವಾಗಿತ್ತು.ಹೀಗಾಗಿ ಆಂಧ್ರಪ್ರದೇಶದ ವಿಶಾಖಪಟ್ಟಣಂನ ಭೀಮಣ್ಣ ಮತ್ತು ನನ್ನರಾವ್ ಅವರಿಂದ ಕಡಿಮೆ ಮೊತ್ತಕ್ಕೆ ಗಾಂಜಾ ಖರೀದಿಸಿ, ಹೆಚ್ಚಿನ ಬೆಲೆಗೆ ನಗರದಲ್ಲಿ ಮಾರಾಟಮಾಡುತ್ತಿದ್ದ.ಇತ್ತೀಚೆಗೆ ಸಂಜಯನಗರ ಠಾಣಾ ವ್ಯಾಪ್ತಿಯ ಭೂಪಸಂದ್ರದ ಬಳಿ ಮಾರಾಟಕ್ಕೆ ಯತ್ನಿಸಿದ್ದಾನೆ. ಈ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಮಾಲು ಸಮೇತ ಬಂಧಿಸಲಾಗಿದೆ. ಈತನ ಮಾಹಿತಿ ಮೇರೆಗೆ ಇಬ್ಬರು ಆಂಧ್ರಪ್ರದೇಶ ಮೂಲದ ಆರೋಪಿಗಳನ್ನು ಬಂಧಿಸಲಾಗಿದೆ. ಈ ಆರೋಪಿಗಳು ಒಡಿಶಾದಿಂದ ಗಾಂಜಾ ತರಿಸುತ್ತಿದ್ದು, ಅದನ್ನು ಶಬ್ಬಿರ್‌ಖಾನ್‌ಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.
ಬಿಎಸ್ಸಿ ಪದವಿಧರ ಬಂಧನ: ಪ್ರಕರಣದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ಬಿಎಸ್ಸಿ ಪದವಿಧರನನ್ನು ಸೋಲದೇವನಹಳ್ಳಿ ಪೊಲೀ ಸರು ಬಂಧಿಸಿದ್ದಾರೆ. ಸುರೇಂದ್ರ ಅಲಿಯಾಸ್ ಸೂರ್ಯ (21) ಬಂಧಿತ. ಆರೋಪಿಯಿಂದ 4 ಕೆ.ಜಿ.ಗಾಂಜಾ ವಶಕ್ಕೆ ಪಡೆಯಲಾಗಿದೆ. ಇತ್ತೀಚೆಗೆ ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಸೇವನೆ ಮಾಡುತ್ತಿದ್ದ ಜಗ್ನಿನಾದಂ ವಿಕಾಸ್ ಮಿಶಾì ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸುರೇಂದ್ರನ ಹೆಸರು ಬಾಯಿಬಿಟ್ಟಿದ್ದಾನೆ. ಬಳಿಕ ಕಾರ್ಯಾಚರಣೆ ನಡೆಸಿ ಸುರೇಂದ್ರನನ್ನು ಬಂಧಿಸಲಾಗಿದೆ.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಬಿಎಸ್ಸಿ ಪದವಿ ಪಡೆದುಕೊಂಡಿರುವ ಆರೋಪಿ, ಹಣದಾಸೆಗಾಗಿ ಆಂಧ್ರದ ಕೆಲ ವ್ಯಕ್ತಿಗಳಿಂದ ಗಾಂಜಾ ಖರೀದಿಸಿ ನಗರದ ಕಾಲೇಜುಗಳ ಬಳಿ ಮಾರುತ್ತಿದ್ದ. ಇತ್ತೀಚೆಗೆ ಚಿಕ್ಕಬಾಣವಾರ ರೈಲು ನಿಲ್ದಾಣ ಸಮೀಪದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿದ್ದಾನೆ. ಈ ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.