ಬೆಂಗಳೂರು: ಎಂಇಎಸ್ ರಸ್ತೆಯ ವಿನೋದ್ ಬ್ಯಾಂಕರ್ಸ್ ಜ್ಯುವೆಲರ್ಸ್ ಮಳಿಗೆಯಲ್ಲಿ ಸೆ. 20ರಂದು ಸಿನಿಮೀಯ ರೀತಿಯಲ್ಲಿ ಕಳ್ಳತನ ಮಾಡಿದ್ದ ಮೂವರು ಅಂತರಾಜ್ಯ ಕಳ್ಳರನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಘಟನಾ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿ ಹಾಗೂ ಇತರ ಠಾಣೆಗಳಲ್ಲಿನ ಹಳೆ ಆರೋಪಿಗಳ ಬೆರಳಚ್ಚು ಮುದ್ರೆಯ ಜಾಡು ಹಿಡಿದು ಇನ್ಸ್ ಪೆಕ್ಟರ್ ಎ .ಗುರುಪ್ರಸಾದ್ ನೇತೃತ್ವದ ತಂಡ ಮೂವರನ್ನೂ ಸೆರೆ ಹಿಡಿದಿದೆ.
ರಾಜಸ್ಥಾನ ಮೂಲದ ಗೋಪಾರಾಮ್ (28) ಜಿತೇಂದರ್ ಮಾಳಿ (31) ವೀರ್ ಮಾ ರಾವ್ (32) ಬಂದಿತರು. ಆರೋಪಿಗಳಿಂದ 90 ಲಕ್ಷ ರೂ. ಮೌಲ್ಯದ ಒಂದು ಕೆ.ಜಿ 750 ಗ್ರಾಂ ಆಭರಣ,3.5 ಲಕ್ಷ ರೂ. ನಗದು ಎರಡು ಬೈಕ್, ಒಂದು ಏರ್‌ಗನ್‌ನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ಪೈಕಿ ಗೋಪಾರಾಮ್ ಈ ಹಿಂದೆಯೂ ಹಲವು ಜ್ಯುವೆಲರಿ ಶಾಪ್‌ಗಳಲ್ಲಿ ಕಳ್ಳತನ ಮಾಡಿದ್ದ ಎಂಬುದು ಬಯಲಾಗಿದೆ.
2004ರಲ್ಲಿ ಯಲಹಂಕ ಠಾಣಾ ವ್ಯಾಪ್ತಿ,2016ರಲ್ಲಿ ಬಾಗಲೂರು ಠಾಣಾ ವ್ಯಾಪ್ತಿ, ತಾನು ಕೆಲಸ ಮಾಡುತ್ತಿದ್ದ ಜ್ಯುವೆಲರಿ ಶಾಪ್‌ನಲ್ಲಿ ಲಕ್ಷಾಂತರ ರೂ. ಮೌಲ್ಯದ ಆಭರಣ ದೋಚಿ ಜೈಲಿಗೆ ಸೇರಿದ್ದ. ಜಾಮೀನಿನ ಮೇರೆಗೆ ಜೈಲಿಂದ ಬಿಡುಗಡೆಯಾದ ಬಳಿಕ ಡೆಲೆವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ ಗೋಪಾರಾಮ್ ಕೆಲ ತಿಂಗಳ ಹಿಂದೆ ಫುಡ್ ಡೆಲೆವರಿ ನೀಡಲು ಹೋದಾಗ ವಿನೋದ್ ಬ್ಯಾಂಕರ್ಸ್‌ನಲ್ಲಿ ಬೆಳಗ್ಗೆ ಹೊತ್ತು ಹೆಚ್ಚಿನ ಜನರು ಇಲ್ಲದಿರುವುದನ್ನು ಗಮನಿಸಿದ್ದ. ಜತೆಗೆ, ಭದ್ರತೆಯೂ ಅಷ್ಟಾಗಿ ಇಲ್ಲದಿರುವುದನ್ನು ತಿಳಿದು ತನ್ನ ಸ್ನೇಹಿತರಾದ ಜಿತೇಂದರ್ ಹಾಗೂ ಮೀರ್ ಮಾ ಜತೆ ಸೇರಿ ಆಭರಣ ಕಳವು ಮಾಡುವ ಬಗ್ಗೆ ಸಂಚು ರೂಪಿಸಿದ್ದ.
ಸೆ. 20ರಂದು ಮಳಿಗೆಗೆ ಬಂದು ಚಿನ್ನದ ಸರಬೇಕೆಂದು ಕೇಳಿ ಅದನ್ನು ಮಾಡಿಕೊಡಲು ಸಾವಿರ ರೂ. ಅಡ್ವಾನ್ಸ್ ನೀಡಿದರು. ಬಳಿಕ ಅದೇದಿನ ಅಂಗಡಿಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಬಂದು ಚಿನ್ನದ ಸರ ಕೇಳಿದರು. ಅದನ್ನು ತೋರಿಸುತ್ತಲೇ ಉಂಗುರ ಬೇಕು ಎಂದರು. ಅದನ್ನು ತರಲು ಅಂಗಡಿ ಕೆಲಸದಾತ ರಾಹುಲ್ ಒಳ ಹೋದಾಗ ಹಿಂದೆ ನುಗ್ಗಿ ಪಿಸ್ತೂಲ್ ತೋರಿಸಿ ಚಿನ್ನಾಭರಣ ದೋಚಿದ್ದರು ಎಂದು ಪೊಲೀಸರು ಹೇಳಿದರು