Advertisement

ಶಂಕಿತ ಉಗ್ರನ ಬಂಧನ

12:44 AM Feb 27, 2020 | Lakshmi GovindaRaj |

ಬೆಂಗಳೂರು: ಐಸಿಸ್‌ ಪ್ರೇರಿತ ಅಲ್‌-ಹಿಂದ್‌ ಸಂಘಟನೆಯ ಮತ್ತೂಬ್ಬ ಶಂಕಿತ ಉಗ್ರನನ್ನು ಬೆಂಗಳೂರಿನ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಮತ್ತು ಆಂತರಿಕ ಭದ್ರತಾ ದಳ(ಐಎಸ್‌ಡಿ) ಅಧಿಕಾರಿಗಳು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ.

Advertisement

ಡಿ.ಜೆ.ಹಳ್ಳಿಯ ಕಾಫಿ ಬೋರ್ಡ್‌ ಕಾಲೋನಿ ನಿವಾಸಿ ಫ‌ಜಿ ಅಲಿಯಾಸ್‌ ಸೈಯದ್‌ ಫ‌ಜಿ ಅಲಿಯಾಸ್‌ ಫ‌ಜಿ ಉರ್‌ ರೆಹಮಾನ್‌ (36) ಬಂಧಿತ. ಇವೆಂಟ್‌ ಮ್ಯಾನೆಜ್‌ಮೆಂಟ್‌ ಸಂಸ್ಥೆ ನಡೆಸುವ ಫ‌ಜಿ, ಅಲ್‌-ಹಿಂದ್‌ ಸಂಘಟನೆ ಮತ್ತು ಐಸಿಸ್‌ ಸಂಘಟನೆಯ ಕರ್ನಾಟಕ ಮತ್ತು ತಮಿಳುನಾಡು ವಿಭಾಗದ ಮುಖ್ಯಸ್ಥ ಮೆಹಬೂಬ್‌ ಪಾಷಾನ ಆತ್ಯಾಪ್ತರ ಲ್ಲೊಬ್ಬನಾಗಿದ್ದಾನೆ. ಪಾಷಾನ ಸೂಚನೆ ಮೇರೆಗೆ ವಿಧ್ವಂಸಕ ಕೃತ್ಯಕ್ಕೆ ಬೇಕಾಗಿರುವ ಎಲ್ಲ ಸಾಮಗ್ರಿಗಳನ್ನು ಸರಬರಾಜು ಮಾಡುತ್ತಿದ್ದ.

ಜನವರಿ ಎರಡನೇ ವಾರದಲ್ಲಿ ತಮಿಳುನಾಡಿನ ಕ್ಯೂಬ್ರಾಂಚ್‌ ಪೊಲೀಸರು ಮತ್ತು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಸುದ್ದುಗುಂಟೆಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಸುಮಾರು ಐದಾರು ಮಂದಿ ಶಂಕಿತರನ್ನು ಬಂಧಿಸಲಾಗಿತ್ತು. ಈ ವಿಚಾರ ತಿಳಿದ ಇತರೆ ನಾಲ್ವರು ಶಂಕಿತರು ತಲೆಮರೆಸಿಕೊಂಡಿದ್ದರು. ಈ ಪೈಕಿ ಫ‌ಜಿ ಕೂಡ ಒಬ್ಬ.

ಒಂದು ತಿಂಗಳ ಹಿಂದಷ್ಟೇ ಮತ್ತೆ ಬೆಂಗಳೂರಿಗೆ ಬಂದು ನಾನಾ ಪ್ರದೇಶಗಳಲ್ಲಿ ವಾಸವಾಗಿದ್ದುಕೊಂಡು ಗ್ಯಾರೆಜ್‌ ಕೆಲಸ ಮಾಡುವುದು, ಗೌಪ್ಯವಾಗಿ ಇವೆಂಟ್‌ ಮ್ಯಾನೆಜ್‌ಮೆಂಟ್‌ ಸಂಸ್ಥೆಯನ್ನು ತನ್ನ ಸಹಚರರ ಮೂಲಕ ನಡೆಸುತ್ತಿದ್ದ. ಈತ ಬೆಂಗಳೂರಿಗೆ ಬಂದಿರುವ ವಿಚಾರ ತಿಳಿದ ಬೆಂಗಳೂರು ಎನ್‌ಐಎ ಮತ್ತು ಐಎಸ್‌ಡಿ ಅಧಿಕಾರಿಗಳು ಹತ್ತು ದಿನಗಳಿಂದ ಈತನ ಚಲನವಲನಗಳ ಮೇಲೆ ನಿಗಾವಹಿಸಿದ್ದು, ಮಾರುವೇಷದಲ್ಲಿ ಮಾಹಿತಿ ಸಂಗ್ರಹಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಪಾಷಾ ಹೇಳಿಕೆ ಆಧರಿಸಿ ಕಾರ್ಯಾಚರಣೆ: ಈಗಾಗಲೇ ಬಂಧನಕ್ಕೊಳಗಾಗಿರುವ ಮೆಹಬೂಬ್‌ ಪಾಷಾನ ಹೇಳಿಕೆಯನ್ನಾಧರಿಸಿ ಆರೋಪಿಯನ್ನು ಹಿಂಬಾಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಮುಂಜಾನೆ ಎನ್‌ಐಎ ಮತ್ತು ಐಎಸ್‌ಡಿ ಅಧಿಕಾರಿಗಳು ಆರೋಪಿಯನ್ನು ಡಿ.ಜಿ.ಹಳ್ಳಿಯ ಟ್ಯಾನರಿ ರಸ್ತೆಯಲ್ಲಿ ಬಂಧಿಸಲು ಮಂದಾಗಿದ್ದರು. ಪೊಲೀಸರನ್ನು ಕಂಡು ದಂಗಾದ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿ ಟ್ಯಾನರಿಯೊಳಗೆ ನುಗ್ಗಿದ್ದಾನೆ.

Advertisement

ಪ್ರಾಣಿಗಳ ಚರ್ಮ ಸುಲಿಯುವ ಜಾಗವಾದರಿಂದ ಅಲ್ಲಲ್ಲಿ ಅವಿತುಕೊಂಡು ಸುಮಾರು ಒಂದೂವರೆ ಗಂಟೆಗಳ ಕಾಲ ಅಲೆದಾಡಿಸಿದ್ದಾನೆ. ಈ ಮಧ್ಯೆ ಅಲ್ಲಿನ ದುರ್ವಾಸನೆ ಮತ್ತು ಕತ್ತಲು ಅಧಿಕವಾದ್ದರಿಂದ ಪೊಲೀಸರು ಒಳ ಹೋಗಲು ಒದ್ದಾಡಿದ್ದಾರೆ. ಬಳಿಕ ಹೆಚ್ಚಿನ ಪೊಲೀಸ್‌ ಸಿಬ್ಬಂದಿ ಕರೆಸಿ ಕೊಂಡು ಇಡೀ ಟ್ಯಾನರಿಯನ್ನು ಸುತ್ತುವರಿಯ ಲಾಗಿತ್ತು. ನಂತರ ಒಂದಷ್ಟು ಅಧಿಕಾರಿಗಳು ಟ್ಯಾನರಿಯೊಳಗೆ ನುಗ್ಗಿದ್ದಾರೆ. ಈ ವೇಳೆ ಯಾವ ಕಾರಣಕ್ಕೆ ಬಂಧಿಸುತ್ತಿದ್ದಿರಾ ಎಂದು ಫ‌ಜಿ ಗಲಾಟೆ ಮಾಡಿದ್ದಾನೆ.

ಕೊನೆಗೆ ಟ್ಯಾನರಿಯಿಂದ ಹೊರಬಂದು ಓಡುವಾಗ ಒಂದು ಕಿ.ಮೀ ದೂರ ಬೆನ್ನಟ್ಟಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಜತೆಗೆ ಜೀಪ್‌ ಹತ್ತಿಸುವಾಗಲೂ ಸ್ಥಳೀಯರ ನೆರವು ಕೋರಿದ್ದಾನೆ. ಅನಂತರ ಪೊಲೀಸರು ಸಾರ್ವಜನಿಕರಿಗೆ ಮನವರಿಕೆ ಮಾಡಿ ಬಂಧಿಸಿ ಕರೆದೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ. ಸೋಮವಾರ ಎನ್‌ಐಎ ಅಧಿಕಾರಿಗಳು ಈತನ ಮನೆ ಮತ್ತು ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆಸಿ ಪರಿಶೀಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next