ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿ ರಾಜಸ್ಥಾನಕ್ಕೆ ಪರಾರಿಯಾಗಿದ್ದ ಆರೋಪಿಯನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಕುಶಾಲ್ ಸಿಂಗ್ ರಜಪೂತ್ (21) ಬಂಧಿತ. ಆರೋಪಿಯಿಂದ 38.20 ಲಕ್ಷ ರೂ. ಮೌಲ್ಯದ 955 ಗ್ರಾಂ. ಚಿನ್ನಾಭರಣ ಮತ್ತು 12 ಸಾವಿರ ರೂ. ನಗದು ಹಾಗೂ 281 ಗ್ರಾಂ. ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಆರೋಪಿಯು ಇತ್ತೀಚೆಗೆ ಬಸವನಗುಡಿ ನಿವಾಸಿ ಮೆಹಕ್ ತಿರಗಲ್ ಎಂಬವರ ಮನೆಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ. ಮೆಹಕ್ ತಿರಗಲ್ ಚಿಕ್ಕಪೇಟೆಯಲ್ಲಿ ಅಂಗಡಿಯೊಂದನ್ನು ಹೊಂದಿದ್ದು, ಬಸವನಗುಡಿಯಲ್ಲಿ ವಾಸವಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಪರಿಚಿತರ ಮೂಲಕ ರಾಜಸ್ಥಾನದಿಂದ ಕುಶಾಲ್ ಸಿಂಗ್‌ನನ್ನು ಕೆಲಸಕ್ಕೆಂದು ಕರೆಸಿಕೊಂಡಿದ್ದರು. ಈ ಮಧ್ಯೆ ದೀಪಾವಳಿ ಹಬ್ಬದ ದಿನ ಮನೆಯನ್ನು ಸ್ವಚ್ಛ ಮಾಡಲು ಕುಶಾಲ್ ಸಿಂಗ್‌ಗೆ ಸೂಚಿಸಿದ್ದ ಮೆಹಕ್, ಚಿಕ್ಕಪೇಟೆಯಲ್ಲಿರುವ ಅಂಗಡಿ ಪೂಜೆಗೆ ತೆರಳಿದ್ದಾರೆ.
ಈ ವೇಳೆ ಮನೆಯ ಕೊಠಡಿಯೊಂದರ ಲಾಕರ್‌ನಲ್ಲಿ ಚಿನ್ನಾಭರಣ ಇರುವುದನ್ನು ನೋಡಿದ ಆರೋಪಿ, ಎಲ್ಲವನ್ನೂ ಚೀಲದಲ್ಲಿ ತುಂಬಿಕೊಂಡು ಜೋದಪುರ ಎಕ್ಸ್‌ಪ್ರೆಸ್ ರೈಲಿನಲ್ಲಿ ರಾಜಸ್ಥಾನಕ್ಕೆ ಪರಾರಿಯಾಗಿದ್ದ. ಸಂಜೆ ಐದು ಗಂಟೆ ಸುಮಾರಿಗೆ ಮೆಹಕ್ ತಿರಗಲ್ ದಂಪತಿ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಬಳಿಕ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಆರೋಪಿಯ ಮೊಬೈಲ್ ನೆಟ್‌ವರ್ಕ್ ಪರಿಶೀಲಿಸಿದಾಗ ರೈಲು ಮಾರ್ಗದ ಮೂಲದ ರಾಜಸ್ಥಾನಕ್ಕೆ ಹೋಗುತ್ತಿರುವ ಮಾಹಿತಿ ಲಭ್ಯವಾಗಿತ್ತು. ಬಳಿಕ ಒಂದು ತಂಡ ರಾಜಸ್ಥಾನಕ್ಕೆ ತೆರಳಿ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಆರೋಪಿಯನ್ನು ಬಂಧಿಸಿದೆ ಎಂದು ಪೊಲೀಸರು ಹೇಳಿದರು. ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂಜುಕೋರರ ಬಂಧನ: ಮತ್ತೊಂದು ಪ್ರಕರಣದಲ್ಲಿ ಬಸವನಗುಡಿಯ ಗಾಂಧಿ ಬಜಾರ್ ಮುಖ್ಯರಸ್ತೆಯ ಟ್ಯಾಗೋರ್ ವೃತ್ತದ ಸಮೀಪದ ಹೋಟೆಲ್ ಒಂದರ ಕಟ್ಟಡದ ಟೆರೇಸ್ ಮೇಲೆ ಅಕ್ರಮವಾಗಿ ಜೂಜಾಟದಲ್ಲಿ ತೊಡಗಿದ್ದ 20 ಮಂದಿಯನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 6.47 ಲಕ್ಷ ರೂ. ನಗದು, 22 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.