Advertisement

ನನ್ನ ಅರೆಸ್ಟ್‌ ಮಾಡಿ ಜೈಲಿಗೆ ಹಾಕಿ : ಸುಪ್ರೀಂ ಗೆ ಜ.ಕರ್ಣನ್‌ ಸಡ್ಡು

04:05 PM Mar 31, 2017 | udayavani editorial |

ಹೊಸದಿಲ್ಲಿ : ಕೋರ್ಟ್‌ ನಿಂದನೆಗಾಗಿ ನನ್ನನ್ನು ಆರೆಸ್ಟ್‌ ಮಾಡಿ ಜೈಲಿಗೆ ಹಾಕಿ ಎಂದು ಕಲ್ಕತ್ತ ಹೈಕೋರ್ಟ್‌ನ ವಿವಾದಿತ  ನ್ಯಾಯಮೂರ್ತಿ ಜಸ್ಟಿಸ್‌ ಸಿ ಎಸ್‌ ಕರ್ಣನ್‌ ಅವರು ಇಂದು ಶುಕ್ರವಾರ ಏಳು ನ್ಯಾಯಾಧೀಶರ ಸುಪ್ರೀಂ ಕೋರ್ಟ್‌ ಪೀಠಕ್ಕೆ ಬಹಿರಂಗವಾಗಿ ಸಡ್ಡು ಹೊಡೆದಿದ್ದಾರೆ. 

Advertisement

ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟಿನ ಸಹೋದ್ಯೋಗಿ ನ್ಯಾಯಾಧೀಶರ ವಿರುದ್ಧ ಮಾಡಿರುವ ಅವಮಾನಕಾರಿ ಹಾಗೂ ಅವಹೇಳನಕಾರಿ ಆರೋಪಗಳಿಗೆ ವಿವರಣೆ ನೀಡಿ ಅಫಿದಾವಿತ್‌ ಸಲ್ಲಿಸುವಂತೆ ಸುಪ್ರೀಂ ಕೋರ್ಟಿನ ವರಿಷ್ಠ ನ್ಯಾಯಮೂರ್ತಿ ಜೆ ಎಸ್‌ ಖೇಹರ್‌ ನೇತೃತ್ವದ ಪೀಠವು ಹೊರಡಿಸಿದ್ದ ಆದೇಶಕ್ಕೆ ಪ್ರತಿಯಾಗಿ ಜಸ್ಟಿಸ್‌ ಕರ್ಣನ್‌ ಅವರು “ನ್ಯಾಯಪೀಠವು ಹೈಕೋರ್ಟ್‌ ನ್ಯಾಯಾಧೀಶನಾಗಿ ನನ್ನ ನ್ಯಾಯಾಂಗ ಹಾಗೂ ಆಡಳಿತಾತ್ಮಕ ಅಧಿಕಾರಿಗಳನ್ನು ಕಸಿದುಕೊಳ್ಳುವ ಮೂಲಕ ನನ್ನ ದೈಹಿಕ ಹಾಗೂ ಮಾನಸಿಕ ಸಂತುಲನೆಯನ್ನು ಕದ್ದಿದೆ’ ಎಂದು ಆರೋಪಿಸಿದರು. 

ಜಸ್ಟಿಸ್‌ ಕರ್ಣನ್‌ ಅವರು ತನ್ನ ವಿರುದ್ಧದ ಕೋರ್ಟ್‌ ನಿಂದನೆಯ ಕ್ರಮದಲ್ಲಿ ಇದೇ ಮೊದಲ ಬಾರಿಗೆ ಇಂದು ಸುಪ್ರೀಂ ಕೋರ್ಟ್‌ ಪೀಠದ ಮುಂದೆ ಹಾಜರಾದರು. ಸುಪ್ರೀಂ ಕೋರ್ಟ್‌ ಪದೇ ಪದೇ ನೊಟೀಸ್‌ ಕೊಟ್ಟು  ತನ್ನ ಮುಂದೆ ಹಾಜರಾಗಬೇಕೆಂದು ನೀಡಿದ್ದ ಆದೇಶವನ್ನು ಕರ್ಣನ್‌ ಅವರು ತಿರಸ್ಕರಿಸಿ ಪೀಠದ ಮುಂದೆ ಹಾಜರಾಗಲು ನಿರಾಕರಿಸಿದ್ದರು.

ಅಂತಿಮವಾಗಿ ಸುಪ್ರೀಂ ಕೋರ್ಟ್‌ ಕರ್ಣನ್‌ ವಿರುದ್ಧ ಜಾಮೀನು ವಾರಂಟನ್ನು ಜಾರಿ ಮಾಡಿತ್ತು. ಪಶ್ಚಿಮ ಬಂಗಾಲದ ಡಿಜಿಪಿ ನೇತೃತ್ವದ ಪೊಲೀಸ್‌ ತಂಡವೊಂದು ಈ ವಾರಂಟನ್ನು ಕರ್ಣನ್‌ ಅವರಿಗೆ ನೀಡಿತ್ತು. 

ಇಂದು ಕಿಕ್ಕಿರಿದು ತುಂಬಿದ್ದ ಕೋರ್ಟ್‌ ರೂಮ್‌ನಲ್ಲಿ ತನ್ನ ಪರವಾಗಿ ತಾನೇ ಹಾಜರಾದ ಜಸ್ಟಿಸ್‌ ಕರ್ಣನ್‌ ಅವರು ಪೀಠದ ಮುಂದೆ ಅಬ್ಬರಿಸಿ ತಾನು ಇನ್ನು ಪುನಃ ಪೀಠದ ಮುಂದೆ ಹಾಜರಾಗುವುದಿಲ್ಲ ಎಂದು ಗುಡುಗಿದರು. 

Advertisement

“ಇವತ್ತು ನಾನು ಇಲ್ಲಿಗೆ ಬಾರದೇ ಇರುತ್ತಿದ್ದರೆ ನೀವು ನನ್ನ ವಿರುದ್ಧ ಜಾಮೀನು ರಹಿತ ವಾರಂಟ್‌ ಜಾರಿ ಮಾಡುತ್ತಿದ್ದಿರಿ. ನಿಮ್ಮ ದೃಷ್ಟಿಯಲ್ಲಿ ನಾನು ಹೇಗೆ ಒಬ್ಬ ಅಪರಾಧಿ ಅಥವಾ ಸಮಾಜ ವಿರೋಧಿ ಶಕ್ತಿ ಅಥವಾ ಒಬ್ಬ ಭಯೋತ್ಪಾದಕನಾಗಿದ್ದೇನೆ ? ನೀವು ನನ್ನ ಘನತೆಯನ್ನು ರಕ್ಷಿಸಬೇಕಿತ್ತು. ಬದಲು ನನ್ನ ಖಾಸಗಿ ಬದುಕನ್ನು ನಾಶಗೊಳಿಸಿದ್ದೀರಿ; ಪೊಲೀಸರು ನನ್ನ ಮನೆಯನ್ನು ಪ್ರವೇಶಿಸಿದರು; ಜನರು ಅದನ್ನು ನೋಡುತ್ತಲೇ ಇದ್ದರು’ ಎಂದು ಜಸ್ಟಿಸ್‌ ಕರ್ಣನ್‌ ಹೇಳಿದರು. 

ಇದಕ್ಕೆ ಉತ್ತರವಾಗಿ ಚೀಫ್ ಜಸ್ಟೀಸ್‌ ಖೇಹರ್‌ ಅವರು, “ಮಿಸ್ಟರ್‌ ಕರ್ಣನ್‌‌, ನಾವು ನಿಮ್ಮ ವಿರುದ್ಧ ಜಾಮೀನು ವಾರೆಂಟ್‌ ಜಾರಿ ಮಾಡಿದ್ದು ನೀವು ಆರೋಪಿ ಎಂಬ ಕಾರಣಕ್ಕಲ್ಲ; ಬದಲು ನೀವು ಕಾನೂನು ಕ್ರಮವನ್ನು ಅನುಸರಿಸಿಲ್ಲ ಎನ್ನುವ ಕಾರಣಕ್ಕೆ; ನೀವೇನೂ ಭಯೋತ್ಪಾದಕರಲ್ಲ’ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next