ನವದೆಹಲಿ: ಒಡಿಶಾ ಮತ್ತು ಪಶ್ಚಿಮ ಬಂಗಾಳ ರಸಗುಲ್ಲಾ ಸಮರದಲ್ಲಿ ಸಿಹಿ ಮಮತಾ ಬ್ಯಾನರ್ಜಿ ಅವರ ಬಾಯಿಗೆ ಬಿದ್ದಿದ್ದೇ ಬಿದ್ದಿದ್ದು, ಇದೀಗ ದೇಶಾದ್ಯಂತ ಇರುವ ಆಹಾರಗಳ ಮೇಲೆಲ್ಲಾ ಪ್ರಾದೇಶಿಕ ಹಕ್ಕು ಸ್ವಾಮ್ಯತೆಯ ಚರ್ಚೆಗಳು ಶುರುವಾಗಿವೆ.
ಈಗ ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಸಾಂಬಾರ್ ಮೇಲೆ ಜಗಳ ಶುರು ವಾಗಿದೆ. ನಿಜಕ್ಕೂ ಸಾಂಬಾರ್ ಎಲ್ಲಿ ಯದ್ದು? ಇದು ಮರಾಠಿಗರಧ್ದೋ, ತಮಿಳಿ ಗರಧ್ದೋ ಎಂಬ ಪ್ರಶ್ನೆ ಎದ್ದಿದೆ. ಸದ್ಯಕ್ಕೆ ಕನ್ನಡಿಗರ ಕಡೆಯಿಂದ ಯಾರೂ ಸಾಂಬಾರ್ ನಮ್ಮದೇ ಎಂಬ ವಾದ ಮಂಡಿಸಿಲ್ಲ. ಆದರೂ ಸಾಂಬಾರ್ ಮರಾಠರ ನಾಡಿನಿಂದ ತಮಿಳುನಾಡಿಗೆ ಹೋಗಿದ್ದೇ ಕರ್ನಾಟಕದ ಮೂಲಕ ಎಂಬುದು ವಿಶೇಷ. ಅಂದರೆ, ಮರಾಠಿಗರು ದಕ್ಷಿಣ ಭಾರತಕ್ಕೆ ಎಂಟ್ರಿಕೊಟ್ಟಿದ್ದೇ ಬಿಜಾಪುರ ಸುಲ್ತಾನರ ಸೇನಾಪಡೆಗೆ ಪ್ರವೇಶಿಸುವ ಮೂಲಕ.
ಆಗ ಮರಾಠಾ ಸೈನ್ಯದ ಮುಖ್ಯಸ್ಥ ಶಹಾಜಿ. ಶಹಾಜಿ ಎಂದರೆ ಶಿವಾಜಿಯ ತಂದೆ. ಶಹಾಜಿಯ ಸಹಾಯದಿಂದ ಬಿಜಾಪುರದ ಸುಲ್ತಾನ್ ದಕ್ಷಿಣ ಕರ್ನಾಟಕದ(ಬೆಂಗಳೂರು ಸೇರಿ) ಬಹಳಷ್ಟು ಭಾಗ ವನ್ನು ವಶಪಡಿಸಿಕೊಂಡಿದ್ದ. ಶಹಾಜಿಯ ಶೌರ್ಯಕ್ಕೆ ಮೆಚ್ಚಿ ಸುಲ್ತಾನ ಬೆಂಗಳೂರು ಸೇರಿದಂತೆ ದಕ್ಷಿಣ ಭಾಗವನ್ನು ಆತನಿಗೆ ಬಳುವಳಿಯಾಗಿ ನೀಡಿದ್ದನಂತೆ. ಶಹಾಜಿ ಮೃತ ನಾದ ಮೇಲೆ ಆತನ ಮಗ ವೆಂಕೋಜಿ ಬೆಂಗಳೂರಿನ ರಾಜನಾಗುತ್ತಾನೆ. ಈತ ನೆರೆಯ ತಂಜಾವೂರನ್ನು ಆಕ್ರಮಿಸಿಕೊಂಡ ಮೇಲೆ ಸಾಂಬಾರ್ ಸ್ಟೋರಿ ಆರಂಭವಾಗುತ್ತೆ. ಮರಾಠಿಗರು ಪಶ್ಚಿಮ ಘಟ್ಟದಲ್ಲಿ ಸಿಕ್ಕ ಕೆಂಪು ಬಣ್ಣದ ಪುನರ್ಪುಳಿ ಹಣ್ಣಿನೊಂದಿಗೆ ಬೇಳೆಯನ್ನು ಬಳಸಿ ಸಾಂಬಾರ್ ಮಾಡುತ್ತಿದ್ದಂತೆ. ಮುಂದೆಯೂ ಇದೇ ಸಾಂಬಾರ್ ಅನ್ನು ಶಹಾಜಿ, ವೆಂಕೋಜಿ ಜತೆಗೆ ಹೋಗುವ ಮರಾಠಿಗರು ತಮಿಳುನಾಡಿನಲ್ಲೂ ಪಸರಿಸುತ್ತಾರೆ ಎಂಬ ಮಾತುಗಳಿವೆ.
ಸಾಂಬಾಜಿ ಮತು ಸಾಂಬಾರ್
ಇನ್ನೊಂದು ಕಥೆ ಎಂದರೆ, ತಂಜಾವೂರಿನ ಆಸ್ಥಾನವನ್ನು ಉಳಿಸಿಕೊಟ್ಟ ಶಿವಾಜಿಯ ಪುತ್ರ ಸಾಂಬಾಜಿಯ ನೆನಪಿಗೋಸ್ಕರ ಸಾಂಬಾರ್ ಎಂಬ ಹೆಸರು ಬಂತಂತೆ! ಆದರೆ ವೆಂಕೋಜಿ ಮತ್ತು ಶಿವಾಜಿ ಮಲಮಕ್ಕಳಾಗಿದ್ದು ಇವರಿಬ್ಬರೂ ಒಬ್ಬರನ್ನೊರು ಭೇಟಿಯಾಗಲೇ ಇಲ್ಲ ಎಂಬ ಮಾತುಗಳೂ ಇವೆ.