ದಾವಣಗೆರೆ: ಮಕ್ಕಳ ಹಕ್ಕುಗಳ ರಕ್ಷಣೆ, ದೌರ್ಜನ್ಯ ತಡೆಗೆ ಸರ್ಕಾರದ ಜೊತೆಗೆ ಇಡೀ ಸಮಾಜ ಕೈ ಜೋಡಿಸಬೇಕಿದೆ ಎಂದು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ, ವಕೀಲ ಎಲ್.ಎಚ್. ಅರುಣಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಗುರುವಾರ, ಬೆಂಗಳೂರಿನ 15 ವರ್ಷದ ಬಾಲಕ ಮಹರ್ಷಿ ಸಂಕೇತ್‌ರ ಧ್ವನಿ ಎತ್ತಿ ಹೆಸರಿನಲ್ಲಿ ಹಮ್ಮಿಕೊಂಡಿರುವ ಸೈಕಲ್ ಜಾಥಾವನ್ನು ಜಯದೇವ ವೃತ್ತದಲ್ಲಿ ಸ್ವಾಗತಿಸಿ, ಮಾತನಾಡಿದ ಅವರು, ದಿನೇ ದಿನೇ ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚುತ್ತಿವೆ. ಇವುಗಳ ತಡಗೆ ಎಲ್ಲರೂ ದನಿ ಎತ್ತಬೇಕು ಜೊತೆಗೆ ಜಾಗೃತಿ ಮೂಡಿಸಬೇಕೆಂದರು.
ಮಕ್ಕಳ ಮೇಲಿನ ದೌರ್ಜನ್ಯ, ಲೈಂಗಿಕ ಪೀಡನೆ ಹೆಚ್ಚಾಗುತ್ತಿರುವುದನ್ನು ಗಮನಿಸಿದ ಕೇಂದ್ರ ಸರ್ಕಾರ 2012ರಲ್ಲಿ ಪ್ರಬಲವಾದ ಕಾಯ್ದೆ ಜಾರಿಮಾಡಿದೆ. ಕಾಯ್ದೆ ಅನ್ವಯ ಆರೋಪಿಗಳಿಗೆ ಜೀವಾವಧಿ, ಗಲ್ಲು ಶಿಕ್ಷೆ ವಿಧಿಸಬಹುದಾಗಿದೆ. ಜೊತೆಗೆ ಸಂತ್ರಸ್ತರಿಗೆ ಸೂಕ್ತ ಕಾನೂನು, ವೈದ್ಯಕೀಯ ಸವಲತ್ತು ನೀಡಲಾಗುತ್ತಿದೆ. ಇದರ ಕುರಿತು ಸಹ ನಾವು ಜಾಗೃತಿ ಮೂಡಿಸಬೇಕು. ಆಗ ದೌರ್ಜನ್ಯ ಪ್ರಮಾಣ ಕಡಿಮೆ ಆಗಲಿದೆ ಎಂದು ಅವರು ಹೇಳಿದರು.
ಬಾಲಕ ಮಹರ್ಷಿ ಸಂಕೇತ್ ಜಾಗೃತಿಗಾಗಿ ಬೆಂಗಳೂರಿನಿಂದ ಸೈಕಲ್ ಜಾಥಾ ಆರಂಭಿಸಿದ್ದು, ಮುಂಬೈವರೆಗೆ ಸಾಗಲಿದ್ದಾರೆ. ಮಾರ್ಗದಲ್ಲಿ ಬರುವ ಪಟ್ಟಣ, ಹಳ್ಳಿಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯ, ಕಾನೂನು ಕುರಿತು ಅರಿವು ಮೂಡಿಸಲಿದ್ದಾರೆ. ಅವರ ಈ ಕಾರ್ಯ ಶ್ಲಾಘನೀಯ ಎಂದರು.
ರೈತ ಮುಖಂಡ ಅರುಣಕುಮಾರ ಕುರುಡಿ ಮಾತನಾಡಿ, ಇಂದು ತಪ್ಪುಗಳು ಆದ ಮೇಲೆ ಟೀಕೆ ಮಾಡುತ್ತಾರೆ. ಹಾಗೆ, ಹೀಗೆ ಮಾಡಲು ಸಲಹೆ ನೀಡುತ್ತಾರೆ. ಆದರೆ, ಸ್ವತಃ ಯಾರೂ ಸಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಯತ್ನ ಮಾಡುವುದಿಲ್ಲ. ಇದಕ್ಕೆ ಅಪವಾದ ಎಂಬಂತೆ ಮಹರ್ಷಿ ಸಂಕೇತ್ ತಾವೇ ಖುದ್ದು ಸೈಕಲ್ ಜಾಥದ ಮೂಲಕ ಅರಿವು ಮೂಡಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆಂದರು.
ಜಾಥಾ ಕೈಗೊಂಡಿರುವ ಮಹರ್ಷಿ ಸಂಕೇತ್ ಮಾತನಾಡಿ, ನಾನು ಬೆಂಗಳೂರಿನಿಂದ ಜಾಥಾ ಆರಂಭಿಸಿದ್ದೇನೆ. ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಮಕ್ಕಳ ಹಿತ ಕಾಯುವಲ್ಲಿ ಎಲ್ಲರೂ ಕೆಲಸ ಮಾಡಬೇಕು. ನಾನೂ ಸಹ ಏನಾದರೂ ಮಾಡಬೇಕೆಂಬ ಉದ್ದೇಶದಿಂದ ಜಾಥಾ ಆರಂಭಿಸಿದ್ದೇನೆ ಎಂದರು. ಚಕ್‌ದೇ ಇಂಡಿಯಾ, ಗಂಗಾಜಲ್ ಹಿಂದಿ ಚಲನಚಿತ್ರಗಳ ಕಲಾ ನಿರ್ದೇಶಕ ಸುಕಾಂತ್, ನೆರಳು ಬೀಡಿ ಕಾರ್ಮಿಕರ ಸಂಘದ ಜಬೀನಾ ಖಾನಂ, ಕರಿಬಸವರಾಜ ಇತರರು ಜಾಥಾ ಸ್ವಾಗತಿಸಿದರು.