Advertisement

Paralympic: ಪ್ಯಾರಾ ಬ್ಯಾಡ್ಮಿಂಟನ್‌; ಸೆಮಿಫೈನಲ್‌ಗೆ ನಿತೇಶ್‌, ಸುಕಾಂತ್‌

10:45 PM Aug 31, 2024 | Team Udayavani |

ಪ್ಯಾರಿಸ್‌: ಭಾರತದ ಪ್ಯಾರಾ ಶಟ್ಲರ್‌ಗಳಾದ ನಿತೇಶ್‌ ಕುಮಾರ್‌ ಮತ್ತು ಸುಕಾಂತ್‌ ಕದಂ ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ ಪುರುಷರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್‌ ತಲುಪಿದ್ದಾರೆ. ಇವರಿಬ್ಬರು ಕ್ರಮವಾಗಿ ಎಸ್‌ಎಲ್‌3 ಮತ್ತು ಎಸ್‌ಎಲ್‌4 ವಿಭಾಗದಿಂದ ಮುನ್ನಡೆ ಸಾಧಿಸಿದರು.

Advertisement

ಕಳೆದ ವರ್ಷ ಚೀನದಲ್ಲಿ ನಡೆದ ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ನಿತೇಶ್‌ ಕುಮಾರ್‌, ಥಾಯ್ಲೆಂಡ್‌ನ‌ ಮೊಂಗ್‌ಖೋನ್‌ ಬುನ್ಸುನ್‌ ಅವರನ್ನು 21-13, 21-14 ಅಂತರದಿಂದ ಸೋಲಿಸಿದರು. ಇದರೊಂದಿಗೆ “ಎ’ ವಿಭಾಗದ ಎಲ್ಲ ಪಂದ್ಯಗಳನ್ನು ಗೆದ್ದು ಅಗ್ರಸ್ಥಾನಿಯಾದರು. ದ್ವಿತೀಯ ಸ್ಥಾನ ಪಡೆದ ಬುನ್ಸುನ್‌ ಕೂಡ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಇದೇ ವಿಭಾಗದಲ್ಲಿದ್ದ ಮನೋಜ್‌ ಸರ್ಕಾರ್‌ ಈಗಾಗಲೇ ಹೊರಬಿದ್ದಿದ್ದಾರೆ.

ಎಸ್‌ಎಲ್‌4 ವಿಭಾಗದಲ್ಲಿ ಸುಕಾಂತ್‌ ಕದಂ ಥಾಯ್ಲೆಂಡ್‌ನ‌ ಟೀಮರೊÅಮ್‌ ಸಿರಿಪೋಂಗ್‌ ಅವರನ್ನು 21-12, 21-12ರಿಂದ ಮಣಿಸಿ ಅಜೇಯ ಓಟ ಬೆಳೆಸಿದರು. ಎಸ್‌ಎಲ್‌4 ವಿಭಾಗದ ಗ್ರೂಪ್‌ ಸ್ಪರ್ಧೆಯಲ್ಲಿ ಅಗ್ರಸ್ಥಾನ ಪಡೆದವರಷ್ಟೇ ಸೆಮಿಫೈನಲ್‌ ಪ್ರವೇಶಿಸುತ್ತಾರೆ. ಸುಕಾಂತ್‌ ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಕಂಚು ಜಯಿಸಿದ್ದರು.

ಎಸ್‌ಎಲ್‌ 4 ವಿಭಾಗದಿಂದ ಮತ್ತೋರ್ವ ಶಟ್ಲರ್‌ ಸುಹಾಸ್‌ ಯತಿರಾಜ್‌ ಈಗಾಗಲೇ ಸೆಮಿಫೈನಲ್‌ ತಲುಪಿದ್ದಾರೆ. ಹೀಗಾಗಿ ಭಾರತಕ್ಕೆ ಒಂದು ಪದಕ ಖಾತ್ರಿಯಾಗಿದೆ.

ಮನ್‌ದೀಪ್‌ ಮುನ್ನಡೆ:

Advertisement

ವನಿತಾ ಸಿಂಗಲ್ಸ್‌ ಎಸ್‌ಎಲ್‌3 ವಿಭಾಗದಲ್ಲಿ ಆಸ್ಟ್ರೇಲಿಯದ ವಿನಟ್‌ ಸೆಲಿನ್‌ ಔರ್‌ಲೀ ಅವರನ್ನು 21-23, 21-10, 21-17ರಿಂದ ಮಣಿಸಿದ ಮನ್‌ದೀಪ್‌ ಕೌರ್‌ ಕ್ವಾರ್ಟರ್‌ ಫೈನಲ್‌ ತಲುಪಿದರು.

ಶುಕ್ರವಾರ ರಾತ್ರಿಯ ಮಿಶ್ರ ಡಬಲ್ಸ್‌ನಲ್ಲಿ ಸುಹಾಸ್‌ ಯತಿರಾಜ್‌-ಪಲಕ್‌ ಕೊಹ್ಲಿ ಎಸ್‌ಎಲ್‌3 ವಿಭಾಗದ ಮೊದಲ ಪಂದ್ಯದಲ್ಲಿ ಸೋಲನುಭವಿಸಿದರು. ನಿತೇಶ್‌ ಕುಮಾರ್‌-ತುಳಸಿಮತಿ ಮುರುಗೇಶನ್‌ ಜೋಡಿಗೂ ಸೋಲು ಎದುರಾಯಿತು. ಮಿಶ್ರ ಡಬಲ್ಸ್‌ನಲ್ಲಿ ಭಾರತದ ಏಕೈಕ ಗೆಲುವಿಗೆ ಸಾಕ್ಷಿಯಾದವರು ನಿತ್ಯಾ ಶಿವನ್‌ ಸುಮತಿ-ಶಿವರಾಜನ್‌ ಸೊಲೈಮಲೈ.

Advertisement

Udayavani is now on Telegram. Click here to join our channel and stay updated with the latest news.

Next