Advertisement

ಹೊಟ್ಟೆ ಮತ್ತು ಬಟ್ಟೆಯ ಸುತ್ತ

11:48 AM Dec 15, 2017 | |

ನನ್ನ ಪಾತ್ರವನ್ನು ಹೇಗೆ ವ್ಯಾಖ್ಯಾನಿಸುತ್ತೀರಾ ಎಂಬ ಒಂದು ಪ್ರಶ್ನೆಯನ್ನು ಅನಂತ್‌ ನಾಗ್‌, ನಿರ್ದೇಶಕ ನರೇಂದ್ರ ಬಾಬು ಅವರ ಮುಂದಿಟ್ಟರಂತೆ. ನರೇಂದ್ರ ಬಾಬು ಹೆಚ್ಚೇನೂ ವಿಚಲಿತರಾಗಲಿಲ್ಲವಂತೆ. “ನಿಮ್ಮ ಪಾತ್ರ ಸಾಗರವಿದ್ದಂತೆ. ಸಾಗರವು ಹೇಗೆ ನದಿಗಳನ್ನು ತನ್ನೊಳಗೆ ಸ್ವೀಕರಿಸುತ್ತದೋ, ನೀವು ಸಹ ಎಲ್ಲವನ್ನೂ ಸ್ವೀಕರಿಸುತ್ತೀರಾ’ ಎಂದರಂತೆ. ಅಷ್ಟೇ ಅಲ್ಲ, “ಸಮುದ್ರದ ಮೇಲೆ ಎಷ್ಟೇ ಅಲೆಗಳಿದ್ದರೂ, ಒಳಗೆ ಪ್ರಶಾಂತವಾಗಿರುವಂತೆ ನಿಮ್ಮ ಪಾತ್ರವೂ’ ಇರುತ್ತದೆ ಎಂದರಂತೆ. ಇಷ್ಟು ಗಂಭೀರವಾಗಿ ತಮ್ಮ ಪಾತ್ರದ ಬಗ್ಗೆ ನಿರ್ದೇಶಕರು ಹೇಳಿದ್ದನ್ನು ಕೇಳಿ, ಅನಂತ್‌ ನಾಗ್‌ ಅವರು ಬಹಳ ಇಂಪ್ರಸ್‌ ಆಗಿದ್ದಾರೆ. ಮೊದಲೇ “ಕಬೀರಾ’ ಚಿತ್ರದಲ್ಲಿ ರಮಾನಂದರ ಪಾತ್ರ ಮಾಡುವಾಗ, ನಿರ್ದೇಶಕರು ಹೇಗೆ ಎಂದು ತಿಳಿದುಕೊಂಡಿದ್ದ ಅನಂತ್‌ ನಾಗ್‌ ಅವರು, ಈ ಮಾತುಗಳನ್ನು ಕೇಳಿ ಖುಷಿಯಾಗಿದ್ದಾರೆ. ತಕ್ಷಣವೇ “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ.

Advertisement

ಸಾಮಾನ್ಯವಾಗಿ ಅನಂತ್‌ ನಾಗ್‌ ಅವರು ತಮ್ಮ ಚಿತ್ರಗಳ ನಿರ್ದೇಶಕರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಆದರೆ, “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ನಿರ್ದೇಶಕ ನರೇಂದ್ರ ಬಾಬು ಅವರ ಬಗ್ಗೆ ಬಹಳ ಖುಷಿಯಾಗಿರುವ ಅನಂತ್‌ ನಾಗ್‌, ಪತ್ರಕರ್ತರೆಲ್ಲಾ ಬಾಬು ಅವರಿಗೆ ಇನ್ನಷ್ಟು ಪ್ರೋತ್ಸಾಹ ಕೊಡಬೇಕು ಎಂದರು. ಈ ತರಹದ ಚಿತ್ರವು ಕನ್ನಡ ಚಿತ್ರರಂಗದಲ್ಲೇ ಬಂದಿರದಂತಹ ಒಂದು ವಿಭಿನ್ನವಾದ ಚಿತ್ರ ಅದಾಗಲಿದೆ ಎಂದು ಮೆಚ್ಚಿಕೊಂಡರು. ಇದೆಲ್ಲಾ ಆಗಿದ್ದು “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ.

“ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರವು ಸದ್ಯಕ್ಕೆ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದ್ದು, ಇನ್ನೊಂದೆರೆಡು ತಿಂಗಳಲ್ಲಿ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ, ಚಿತ್ರಕ್ಕೆ ರಾಮಚಂದ್ರ ಹಡಪದ್‌ ಸಂಯೋಜಿಸಿರುವ ಹಾಡುಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅನಂತ್‌ ನಾಗ್‌, “ಬಾಬು ಮೂರು ಕಥೆಗಳನ್ನು ತಂದಿದ್ದರು. ಅದರಲ್ಲಿ ಈ ಕಥೆ ಬಹಳ ಇಷ್ಟವಾಯಿತು. ಆದರೆ, ಇಂಥದ್ದೊಂದು ಕಥೆಯನ್ನು ತೆರೆಯ ಮೇಲೆ ಹೇಗೆ ತರುತ್ತಾರೆ ಎಂಬ ಕುತೂಹಲ ಇದ್ದೇ ಇತ್ತು. ಚೆನ್ನಾಗಿ ಮಾಡಿಕೊಂಡು ಬರುತ್ತಾರೆ ಎಂಬ ಭರವಸೆ ಇತ್ತು. ಏಕೆಂದರೆ, “ಕಬೀರಾ’ ಚಿತ್ರದಲ್ಲಿ ಬಾಬು ಅವರ ಕೆಲಸ ನೋಡಿದ್ದೆ. ಅದರಂತೆ ಚೆನ್ನಾಗಿ ಕಥೆ ಮಾಡಿಕೊಂಡು ಬಂದರು. ಈ ಚಿತ್ರದಲ್ಲಿ ನಟಿಸಿದ್ದು ಒಂದೊಳ್ಳೆಯ ಅನುಭವ. ಎರಡು ತಲೆಮಾರಿನ ಕಥೆ ಇದು. ಮದುವೆ ಮತ್ತು ಲಿವಿಂಗ್‌ ಟುಗೆದರ್‌ ಕುರಿತ ಕಥೆ ಇಲ್ಲಿದೆ. ಸಂಭಾಷಣೆಗಳು ಬಹಳ ಚೆನ್ನಾಗಿವೆ. ಈ ಚಿತ್ರದಲ್ಲಿ ನಟಿಸಿದ್ದು ಸಮಾಧಾನ ತಂದಿದೆ’ ಎಂದು ಖುಷಿಪಟ್ಟರು.

ನಿರ್ದೇಶಕ ನರೇಂದ್ರ ಬಾಬು ಬಹಳ ನರ್ವಸ್‌ ಆಗಿದ್ದರು. ಬಹಳ ಗಡಿಬಿಡಿಯಲ್ಲೇ ಮಾತಾಡಿ ಮುಗಿಸಿದರು. “ಅನಂತ್‌ ನಾಗ್‌ ಅವರ ಜೊತೆಗೆ ಒಂದು ಪೂರ್ಣಪ್ರಮಾಣದ ಚಿತ್ರ ಮಾಡಬೇಕು ಎಂದು ಆಸೆ ಇತ್ತು. ನಿರ್ಮಾಪಕರು ಸಹ ಅನಂತ್‌ ನಾಗ್‌ ಅವರ ಜೊತೆಗೆ ಚಿತ್ರ ಮಾಡುವುದಾದರೆ ನಿರ್ಮಾಣಕ್ಕೆ ಸಿದ್ಧ ಎಂದು ಹೇಳಿದ್ದರು. ಅನಂತ್‌ ಸಾರ್‌ ಒಪ್ಪಿ ಚಿತ್ರದಲ್ಲಿ ನಟಿಸಿದರು. ಬರೀ ನಟಿಸಿದ್ದಷ್ಟೇ ಅಲ್ಲ, ಬಹಳ ಪ್ರೀತಿಯಿಂದ ಸಹಾಯ ಮಾಡಿದರು. ಇನ್ನು ನಾಯಕಿಯ ಪಾತ್ರಕ್ಕೆ ರಾಧಿಕಾ ಪಂಡಿತ್‌ ಅಥವಾ ಶ್ರುತಿ ಹರಿಹರನ್‌ ಇದ್ದರೆ ಚಂದ ಎಂದನಿಸಿತ್ತು. ಆದರೆ, ನಿರ್ಮಾಪಕರು ರಾಧಿಕಾ ಚೇತನ್‌ ಅವರಿಂದ ಈ ಪಾತ್ರ ಮಾಡಿಸಿದರೆ ಚೆನ್ನ ಎಂಬ ಸಲಹೆ ನೀಡಿದರು. ರಾಧಿಕಾ ಸಹ ಒಪ್ಪಿಕೊಂಡು ಚಿತ್ರದಲ್ಲಿ ನಟಿಸಿದರು’ ಎಂದರು.

ನಂತರ ರಾಧಿಕಾ ಚೇತನ್‌, ನಿರ್ಮಾಪಕರಾದ ಸುದರ್ಶನ್‌, ರಾಮಮೂರ್ತಿ ಮತ್ತು ಹರೀಶ್‌ ಶೇರಿಗಾರ್‌, ಸಂಗೀತ ನಿರ್ದೇಶಕ ರಾಮಚಂದ್ರ ಹಡಪದ್‌ ಮುಂತಾದವರು ಚಿತ್ರದಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next