Advertisement

Padil ಸುತ್ತಮುತ್ತ: ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡಗುಂಡಿ; ಸಂಚಾರ ದುಸ್ತರ

03:16 PM Oct 15, 2024 | Team Udayavani |

ಪಡೀಲ್‌: ರಾಷ್ಟ್ರೀಯ ಹೆದ್ದಾರಿ 73ರ ನಗರದ ಪಡೀಲ್‌ ರೈಲ್ವೇ ಕೆಳಸೇತುವೆ ಬಳಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರ ದುಸ್ತರವಾಗಿದೆ.

Advertisement

ನಂತೂರಿನಿಂದ ಬಿ.ಸಿ.ರೋಡ್‌ ವರೆಗೆ ಸಂಚಾರಕ್ಕೆ ಬಹುತೇಕ ಯೋಗ್ಯವಾಗಿರುವ ಹೆದ್ದಾರಿಯಲ್ಲಿ ಪಡೀಲ್‌ನಲ್ಲಿ ಮಾತ್ರ ಗುಂಡಿಗಳು ಉಂಟಾಗಿವೆ. ಇಲ್ಲಿ ಟಾಟಾ ಶೋ ರೂಂ ಮುಂಭಾಗದಲ್ಲಿ ಮಳೆಗಾಲದಲ್ಲಿ ರಸ್ತೆಯಲ್ಲೇ ಕೆರೆಯಂತೆ ನೀರು ಸಂಗ್ರಹ ಗೊಳ್ಳುತ್ತದೆ. ಇದರಿಂದಾಗಿ ಘನ ವಾಹನಗಳ ಸಂಚಾರಿಸುವಾಗ ಡಾಮರು ಎದ್ದು ಹೋಗಿದೆ. ವಾಹನಗಳ ನಿರಂತರ ಓಡಾಟ ದಿಂದ ಸ್ಥಳದಲ್ಲಿ ಗುಂಡಿಗಳು ಉಂಟಾಗಿವೆ. ಇನ್ನೊಂದು ಭಾಗದಲ್ಲಿರುವ ಬಿ.ಸಿ.ರೋಡ್‌ – ಮಂಗಳೂರು ರಸ್ತೆಯಲ್ಲೂ ಗುಂಡಿ ಗಳಿದ್ದು, ದ್ವಿಚಕ್ರ ವಾಹನ ಸವಾರರಿಗೆ ಅಪಾಯ ಕಟ್ಟಿಟ್ಟ ಬುತ್ತಿಯಂತಾಗಿದೆ.

ಚರಂಡಿ ವ್ಯವಸ್ಥೆ ಇಲ್ಲ
ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೆ ಜೋರು ಮಳೆ ಸುರಿಯುವಾಗ ಪಡೀಲ್‌ ಭಾಗದಿಂದ ಹರಿದು ಬರುವ ನೀರು ಇಲ್ಲಿ ರಸ್ತೆಯಲ್ಲಿ ಸಂಗ್ರಹಗೊಳ್ಳುತ್ತಿದೆ. ಇದರಿಂದಾಗಿ ವಾಹನ ಸಂಚಾರಕ್ಕೆ ಅಡಚಣೆಯಾಗುವ ಜತೆಗೆ ರಸ್ತೆಯೂ ಹಾನಿಯಾಗುತ್ತಿದೆ. ಪ್ರತಿವರ್ಷ ಮಳೆಗಾಲದಲ್ಲಿ ಇದೇ ಸಮಸ್ಯೆಯಾಗಿದ್ದು, ಬೇಸಗೆಯಲ್ಲಿ ಡಾಮರು ಹಾಕಿದರೂ, ಒಂದೆರಡು ಮಳೆ ಬೀಳುತ್ತಲೇ ರಸ್ತೆ ಹಾಳಾಗುತ್ತಿದೆ. ಈ ಬಾರಿ ದೊಡ್ಡ ಗಾತ್ರದ ಹೊಂಡ ಗುಂಡಿಗಳು ಉಂಟಾಗಿದೆ. ಇಲ್ಲಿನ ಚರಂಡಿ ವ್ಯವಸ್ಥೆಯನ್ನು ಸರಿಪಡಿಸಿ, ನೀರು ರಸ್ತೆಗೆ ಬಾರದಂತೆ ತಡೆದರೆ ರಸ್ತೆ ಹಾಳಾಗದಂತೆ ತಡೆಯಬಹುದು ಎನ್ನುತ್ತಾರೆ ಸ್ಥಳೀಯರು.

ಹಗಲು ಹೊತ್ತಿನಲ್ಲಾದರೆ ಗುಂಡಿಗಳು ಕಾಣುವುದರಿಂದ ವಾಹನವನ್ನು ನಿಧಾನ ಮಾಡಿ, ಗುಂಡಿಯನ್ನು ತಪ್ಪಿಸಿ ಸಾಗಬಹುದಾಗಿದೆ. ರಾತ್ರಿ ವೇಳೆ ವಾಹನದಲ್ಲಿ ಸಂಚರಿಸುವುದು ಅಪಾಯಕಾರಿಯಾಗಿ ಪರಿಣಮಿಸಿದೆ. ಮಳೆ ಬರುತ್ತಿದ್ದರಂತೂ ಗುಂಡಿಗಳಲ್ಲಿ ನೀರು ನಿಂತು ಗಮನಕ್ಕೆ ಬರುವುದೇ ಇಲ್ಲ. ಮೊದಲ ಬಾರಿಗೆ ರಸ್ತೆಯಲ್ಲಿ ಬರುವ ದ್ವಿಚಕ್ರವಾಹನ ಸವಾರಿಗಂತೂ ಇದರಿಂದ ಪ್ರಾಣಾಪಾಯ ಉಂಟಾಗುವ ಸಾಧ್ಯತೆಯೂ ಇದೆ.

Advertisement

ಅಂಡರ್‌ಪಾಸ್‌ ಒಳಗೂ ಗುಂಡಿ
ಅಂಡರ್‌ಪಾಸ್‌ ಒಳಗೂ ರಸ್ತೆ ಹಾಳಾಗಿದ್ದು, ಈಗಾಗಲೇ ಸಣ್ಣ ಗುಂಡಿಗಳು ಉಂಟಾಗಿವೆ. ಬಿ.ಸಿ. ರೋಡ್‌ ಕಡೆಗಿರುವ ಅಂಡರ್‌ಪಾಸ್‌ನ ಕೊನೆಯಲ್ಲಿ ಮಳೆ ನೀರು ಸಂಗ್ರಹವಾಗಿ, ಘನ ವಾಹನಗಳು ಸಾಗುವಾಗ ದ್ವಿಚಕ್ರ ವಾಹನ ಸವಾರರ ಮೇಲೆ ಕೆಸರಿನ ಸಿಂಚನವಾಗುತ್ತಿದೆ. ಮಂಗಳೂರಿಗೆ ಸಾಗುವ ರಸ್ತೆಯಲ್ಲಿರುವ ಅಂಡರ್‌ಪಾಸ್‌ನ ಒಳಗೂ ಒಂದೆರಡು ಗುಂಡಿಗಳಿದ್ದು, ಮುಂದಕ್ಕೆ ಇದು ದೊಡ್ಡದಾಗುವ ಸಾಧ್ಯತೆಯೂ ಇದೆ.

-ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next