ಆಕೆಯ ಹೆಸರು ಟೊಂಡಾ ಡಿಕ್ಕರ್‌ಸನ್. ಅಂದಿಗಾಗಲೇ ಸುಮಾರು ಎರಡು ವರ್ಷಗಳ ಹಿಂದೆ ವಿವಾಹ ವಿಚ್ಛೇದಿತೆಯಾದ ಆಕೆ ಫ್ಲೋರಿಡಾದ ಹೊಟೇಲ್ ಒಂದರಲ್ಲಿ ಪರಿಚಾರಕಿಯಾಗಿ ದುಡಿಯುತ್ತಿದ್ದಳು. ಹೊಟೇಲಿಗೆ ಬಂದ ಗ್ರಾಹಕರನ್ನು ನಗು ಮುಖದಿಂದ ಸ್ವಾಗತಿಸಿ, ಅವರು ಬಯಸಿದ ತಿನಿಸು, ತೀರ್ಥಗಳನ್ನು ಒಂಚೂರು ಎಡವಟ್ಟಾಗದೇ ವಿತರಿಸುತ್ತಿದ್ದಳು. ಅವಳ ಸೇವೆಯಿಂದ ಸಂತೃಪ್ತರಾಗುವ ಗ್ರಾಹಕರು ಟಿಪ್ಸ್ ಕೊಡುತ್ತಿದ್ದರು. ಅಲ್ಲದೇ ಐಷಾರಾಮಿ ಜನರು ಅಷ್ಟೇ ಐಷಾರಾಮಿ ಹೊಟೇಲ್‌ಗಳಿಗೆ ಬಂದಾಗ ಟಿಪ್ಸ್ ಕೊಡಬೇಕೆನ್ನುವುದು, ಕೊಡುವುದು ತಮ್ಮ ವರ್ಚಸ್ಸು ತೋರಿಸಿಕೊಳ್ಳುವ ವಿಧಾನ ಎಂದೇ ನಂಬಿದ್ದ 1999ರ ಕಾಲವದು. ಹಾಗೆ ಒಂದು ದಿನ ಟೊಂಡಾಂಳಿದ ಉಪಚರಿಸಲ್ಪಟ್ಟ ವ್ಯಕ್ತಿಯೊಬ್ಬ ಅವಳಿಗೆ ಟಿಪ್ಸ್ ಕೊಟ್ಟಿದ್ದ. ಆತನ ಹೆಸರು ಎಡ್ವರ್ಡ್ ಸೆವರ್ಡ್. ಅದೂ ಒಂದು ಲಾಟರಿ ಟಿಕೆಟ್. ಅಂದು ಮನಸ್ಸಿಲ್ಲದಿದ್ದರೂ ನಗು ಮುಖದಿಂದ ಸ್ವೀಕರಿಸಿ ಕಿಸೆಯೊಳಗೆ ತುರುಕಿಕೊಂಡ ಈ ಲಾಟರಿ ಟಿಕೆಟ್ ಬರೋಬ್ಬರಿ ಹತ್ತು ಮಿಲಿಯನ್ ರೂಪಾಯಿ ಗೆಲ್ಲುವ ಅವಕಾಶವಿರುವಂಥದ್ದು!
ಇದಕ್ಕೆ ತಮಾಷೆ ಎನ್ನಬೇಕೋ, ದೇವರ ಕೃಪೆ ಎನ್ನಬೇಕೊ ಒಟ್ಟಾರೆ ಬೇಡದಿದ್ದರೂ ಕಿಸೆಯಲ್ಲಿ ತುರುಕಿಕೊಂಡ ಅದೇ ಲಾಟರಿ ಒಂದು ವಾರದ ಅನಂತರ ಹತ್ತು ಮಿಲಿಯನ್ ಡಾಲರ್ ಹಣವನ್ನೂ ಗೆದ್ದು ಬಿಟ್ಟಿತು! ಇದಲ್ಲವೇ ಅದೃಷ್ಟ ಎಂದರೆ? ಆದರೆ ನಿಜವಾದ ಕಥೆ ಆರಂಭವಾಗುವುದೇ ಇಲ್ಲಿಂದ. ಮೋಜಿಗಾಗಿಯೋ ಕೊಂಡ ಲಾಟರಿ ಟಿಕೆಟ್ ಒಂದನ್ನು ನಶೆಯಲ್ಲಿ ಯಾವುದೋ ಹೊಟೇಲ್‌ನ ಪರಿಚಾರಕಿಯೊಬ್ಬಳಿಗೆ ಕೊಟ್ಟು, ಆ ಸಂಖ್ಯೆ ಹಣವನ್ನೂ ಗೆದ್ದು ಬಿಟ್ಟಾಗ, ಆಕೆಯ ಅದೃಷ್ಟ ದೊಡ್ಡದಿತ್ತು, ಕೈಗೆ ಬಂದ ತುತ್ತು ಬಾಯಿಗೆ ಬರದ ತನ್ನ ದುರಾದೃಷ್ಟವೂ ಸಹ ಅಂದುಕೊಂಡು ಸುಮ್ಮನಿರುವಷ್ಟು ನಿರ್ಲಿಪ್ತ ಭಾವ ಯಾವ ಮನುಷ್ಯನಿಗಿದ್ದೀತು? ಅದೂ ಎಂದಾದರೂ ಒಂದು ದಿನ ತಾನೂ ಮಿಲಿಯಾಧಿಪತಿ ಆಗಬಹುದೆಂದು ಕನಸು ಕಂಡಿದ್ದ ಲಾಟರಿ ಖರೀದಿಸುವ ಹುಚ್ಚಿದ್ದ ಎಡ್ವರ್ಡ್‌ನಂತವನಿಗೆ! ಸಾಧ್ಯವಿರದ ಮಾತು!
ಆದರೆ ಟೊಂಡಾ ಯಾವುದಕ್ಕೂ ಜುಮ್ಮೆನ್ನದೇ ಹೋದಳು. ಈ ಕಥೆ ಇಷ್ಟಕ್ಕೂ ನಿಲ್ಲದೇ ಅಲಬಾಮಾದ ತುಂಬ ಕಾಳಿYಚ್ಚಿನಂತೆ ಹರಡಿತ್ತು. ಎರಡು ವರ್ಷಗಳಿಂದ ಹೇಳಹೆಸರಿಲ್ಲದಂತೆ ನಾಪತ್ತೆಯಾಗಿದ್ದ ಟೊಂಡಾಳ ಮಾಜಿ ಪತಿ ಸುದ್ದಿ ಕೇಳಿ ರಂಗಕ್ಕಿಳಿದಿದ್ದ. ಹಣಕ್ಕಾಗಿ ಟೊಂಡಾಳನ್ನೇ ಅಪಹರಿಸಲು ಯತ್ನಿಸಿದ್ದ. ಹಾಗೆ ನೋಡಿದರೆ ಟೊಂಡಾ ಅಪಹರಿಸಲು ಬಂದವನ ಎದೆಗೆ ಗುಂಡು ಹೊಡೆದು, ಕೋರ್ಟ್ ಮೆಟ್ಟಿಲೇರಿದ್ದಳು!
ತಮ್ಮ ಜತೆಗೆ ಟೇಬಲ್ ಒರೆಸಿಕೊಂಡು ಬದುಕಿದ್ದ ಸಹೋದ್ಯೋಗಿಯೊಬ್ಬಳು ಬೆಳಗಾಗುವುದರೊಳಗಾಗಿ ಕೋಟ್ಯಧಿಪತಿ ಆಗುತ್ತಾಳೆಂದರೆ ಯಾವ ಸಹೋದ್ಯೋಗಿಗಳು ಸಹಿಸಿಯಾರು? ಸಹೋದ್ಯೋಗಿಗಳ ಇಂತಹ ಹೊಟ್ಟೆಕಿಚ್ಚಿನಿಂದಾಗಿ ಟೊಂಡಾಳಿಗೆ ದೊಡ್ಡ ಸಮಸ್ಯೆ ಹುಟ್ಟಿಕೊಳ್ಳುತ್ತದೆ. ಟೊಂಡಾಳಿಗೆ ಸಿಕ್ಕ ಲಾಟರಿ ಟಿಕೆಟ್ ಒಂದು ವೇಳೆ ಹಣ ಗೆದ್ದಿದ್ದೇ ಆದರೆ ಅದರಲ್ಲಿ ತಮಗೂ ಪಾಲು ಕೊಡುತ್ತೇನೆ ಎಂದಿದ್ದಳು ಎನ್ನುವ ನೆಪವಿಟ್ಟುಕೊಂಡು ಹೊಟೇಲ್‌ನ ಮಿಕ್ಕುಳಿದ ಪರಿಚಾರಕರು ಕೇಸ್ ಜಡಿಯುತ್ತಾರೆ! ಹೀಗೆ ಸರಳವಾಗಿ ಹರಿದು ಹೋಗುತ್ತಿದ್ದ ನದಿಗೆ ಕಲ್ಲು ಎಸೆದಂತೆ, ಟೊಂಡಾಳ ಬದುಕಿನ ಶಾಂತ ದಿನಗಳು ಮಾಯವಾಗಿ ಏನೆಲ್ಲ ಘಟಿಸಿದರೂ ಆಕೆ ಕುಗ್ಗುವುದಿಲ್ಲ. ಮುಂದೆ ಅಲಬಾಮಾದ ಕೋರ್ಟ್ ಟೊಂಡಾಳ ಪರವಾಗಿಯೇ ತೀರ್ಪು ಕೊಡುತ್ತದೆ.
ಇಂಥದ್ದೇ ಅದೃಷ್ಟದ ಕಥೆಗಳು ನಮ್ಮ ಭಾರತದಲ್ಲಿಯೂ ಸಾಕಷ್ಟಿವೆ. ಅವರಲ್ಲಿ ಪಂಜಾಬಿನ ಅಮೃತಸರದ ಮಧ್ಯಮ ಕುಟುಂಬದ ರೇಣು ಚೌಹಾಣ್ ಅವರು ಕೂಡ ಒಬ್ಬರು. ಆಕೆಯ ಗಂಡ ಅಮೃತಸರದ ಬೀದಿಯೊಂದರಲ್ಲಿ ಪುಟ್ಟ ಬಟ್ಟೆ ಅಂಗಡಿ ಇಟ್ಟುಕೊಂಡಾತ. ಅದೊಂದು ದಿನ ರೇಣು ಚೌಹಾಣ್ ನೂರು ರೂಪಾಯಿ ಕೊಟ್ಟು ಲಾಟರಿ ಟಿಕೆಟ್ ಖರೀದಿಸುತ್ತಾರೆ. ಅದೇ ಲಾಟರಿ ಟಿಕೆಟ್ ಒಂದು ಕೋಟಿ ಹಣ ತಂದು ಕೊಡುತ್ತದೆ. ಆಕೆ ನಿಜಕ್ಕೂ ಅದೃಷ್ಟವಂತೆಯೇ ಇರಬೇಕು. ಟೊಂಡಾ ಡಿಕ್ಕರ್‌ಸನ್‌ಳಂತೆ ಯಾವುದೇ ತಂಟೆ, ತಕರಾರಿಲ್ಲದೇ ಹಣ ಪಡೆಯುತ್ತಾಳೆ!
ಅದೇ ಪಂಜಾಬಿನ ಬಡ ಮಾಧ್ಯಮ ಕುಟುಂಬದ ಲಕ್ವಿಂದರ್ ಕೌರ್‌ಎನ್ನುವ ಯುವತಿ ದೀಪಾವಳಿ ಬಂಪರ್‌ಲಾಟರಿ ತಂದು ಒಂದೂವರೆ ಕೋಟಿ ಹಣ ಗೆದ್ದಿದ್ದಾಳೆ. ಗೆದ್ದು, ತನ್ನ ಓದುವ ಕನಸನ್ನು, ಪರಿವಾರವನ್ನು ಸುಖೀಯಾಗಿಡಬೇಕೆಂಬ ಆಸೆಯನ್ನು ಪೂರೈಸಿಕೊಂಡಿದ್ದಾಳೆ.
ನಮ್ಮ ಕರ್ನಾಟಕದ ಒಬ್ಬ ಯುವಕನ ಕತೆ ಮತ್ತೂ ರೋಚಕ. ಫೇಸ್‌ಬುಕ್ ಗೆಳೆಯನೊಬ್ಬನನ್ನು ಭೇಟಿಯಾಗುವುದಕ್ಕೆ ಕೇರಳಕ್ಕೆ ತೆರಳಿದ್ದ ಮಂಡ್ಯದ ಸೋಹನ್ ಬಲರಾಂ ಕೇರಳದ ಪುಥನಾಥಿನ ಅಂಗಡಿಯೊಂದರಲ್ಲಿ ನೂರು ರೂಪಾಯಿ ಕೊಟ್ಟು ಕೊಂಡ ಲಾಟರಿಯೊಂದು ಕೋಟಿ ರೂಪಾಯಿ ತಂದು ಕೊಟ್ಟಿತು. ಈ ಫೇಸ್‌ಬುಕ್‌ನಿಂದ, ಅದರ ಮೂಲಕ ಪರಿಚಯ ಆಗುವ ಗೆಳೆಯರಿಂದ ಬರೀ ಅವಾಂತರಗಳೇ ಹೆಚ್ಚು ಎನ್ನುವುದಕ್ಕೆ ಅಪವಾದವಾಗಿ ಸೋಹನ್, ಕೋಟಿ ರೂಪಾಯಿ ಗೆದ್ದಿದ್ದಾನೆ! ಇದು ಅದೃಷ್ಟ ಎಂದರೆ..
ಆದರೆ ಈ ಅದೃಷ್ಟ ಎಲ್ಲರ ಕೈ ಹಿಡಿಯುತ್ತದೆ ಎಂದು ಹೇಳಲು ಬಾರದು. ಇಂತಹ ಅದೃಷ್ಟದ ಜತೆಗೆ ಜೂಜಿಗಿಳಿದು ಹಣ ಕಳೆದುಕೊಂಡು ಬೀದಿ ಪಾಲಾದವರ ಸಂಖ್ಯೆ ಕಡಿಮೆಯದ್ದಲ್ಲ. ಅದೃಷ್ಟ ಕೈಗೂಡಿ ಬಂದರೂ ಅದರ ದೆಸೆಯಿಂದಾಗಿಯೇ ಕೊಲೆಯಾಗಿ ಹೋದವರು ಸಹ.
ಕವಿತಾ ಭಟ್
ಹೊನ್ನಾವರ