ನವದೆಹಲಿ : ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ಕೋವಿಡ್ ಸೋಂಕಿತರಿಗಾಗಿ ಬೆಡ್ ಹಾಗೂ ಆಕ್ಸಿಜನ್ ಅಭಾವ ಕೂಡ ಎದುರಾಗಿದೆ.
ಈ ಬಗ್ಗೆ ಇಂದು ( ಏಪ್ರಿಲ್ 18) ಮಾಧ್ಯಮಗಳ ಜೊತೆ ಮಾತನಾಡಿರುವ ಸಿಎಂ ಅರವಿಂದ್ ಕೇಜ್ರಿವಾಲ್, ಕಳೆದ 24 ಗಂಟೆಯಲ್ಲಿ 25 ಸಾವಿರ ಹೊಸ ಪ್ರಕರಣಗಳು ಪತ್ತೆಯಾಗಿವೆ. ಒಂದು ದಿನದ ಅವಧಿಯಲ್ಲಿ ಪ್ರಕರಣಗಳ ಏರುಗತಿಯ ದರ 24 % ರಿಂದ 30% ಹೆಚ್ಚಾಗಿದೆ ಎಂದು ಮಾಹಿತಿ ನೀಡಿದರು.
ಶನಿವಾರವಷ್ಟೇ ರಾಜ್ಯದಲ್ಲಿ ಬೆಡ್ ಹಾಗೂ ಆಕ್ಸಿಜನ್ ಕೊರತೆ ಇದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿಕೊಂಡಿದ್ದರು. ಕೇಂದ್ರ ಅರೋಗ್ಯ ಸಚಿವ ಹರ್ಷವರ್ಧನ್ ಅವರ ಜತೆಗೂ ಚರ್ಚಿಸಿ ಹೆಚ್ಚುವರಿಯಾಗಿ ಬೆಡ್ ಒದಗಿಸುವಂತೆ ಮನವಿ ಮಾಡಿದ್ದರು.
ಇಂದು ಕೂಡ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆಗೂ ಮಾತನಾಡಿರುವುದಾಗಿ ತಿಳಿಸಿರುವ ಕೇಜ್ರಿವಾಲ್, ಕೇವಲ 100 ಐಸಿಯು ಬೆಡ್‍ಗಳ ಉಳಿದುಕೊಂಡಿವೆ. ಆಕ್ಸಿಜನ್ ಕೂಡ ಕೊರತೆ ಎದುರಾಗಿದೆ. ದೆಹಲಿಯಲ್ಲಿರುವ 10,000 ಬೆಡ್‍ಗಳಲ್ಲಿ 1800 ನಮಗೆ ನೀಡಲಾಗಿದೆ. ಆದರೆ, ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ 7000 ಬೆಡ್‍ಗಳನ್ನು ನೀಡುವಂತೆ ಕೇಂದ್ರದ ಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಎಂದರು.
ಇನ್ನೊಂದು ಎರಡ್ಮೂರು ದಿನಗಳಲ್ಲಿ ಯಮುನಾ ಕ್ರೀಡಾ ಕಾಂಪ್ಲೆಕ್ಸ್ ನಲ್ಲಿ ಆಕ್ಸಿಜನ್ ಒಳಗೊಂಡ 6000 ಬೆಡ್‍ಗಳನ್ನು ನಾವು ಸಿದ್ಧಪಡಿಸುತ್ತೇವೆ. ಅದೇ ರೀತಿ ಕಾಮನ್ ವೆಲ್ತ್ ಆಟಗಳ ಗ್ರಾಮ ಹಾಗೂ ಕೆಲವು ಶಾಲೆಗಳನ್ನು ಕೋವಿಡ್ ಆರೈಕೆ ಕೇಂದ್ರಗಳನ್ನಾಡಿ ಮಾರ್ಪಡಿಸುತ್ತೇವೆ ಎಂದು ಸಿಎಂ ಹೇಳಿದರು.