Advertisement
ನಮ್ಮ ದೇಹದಲ್ಲಿ ಒಂದು ಎಲುಬು ಇನ್ನೊಂದು ಎಲುಬನ್ನು ಸಂಧಿಸುವ ಸ್ಥಳದಲ್ಲಿ ಅವು ಮೃದುವಾದ ಒಂದು ಪದರದಿಂದ ಆವೃತವಾಗಿರುತ್ತವೆ. ಈ ಮೃದು ಕವಚವನ್ನು ಕಾರ್ಟಿಲೇಜ್ ಎಂದು ಕರೆಯಲಾಗುತ್ತಿದ್ದು, ಇದು ವಿವಿಧ ಕಾರಣಗಳಿಂದಾಗಿ ಇನ್ನಷ್ಟು ಮೃದುವಾಗುತ್ತದೆ ಮತ್ತು ನಾಶವಾಗುತ್ತದೆ. ನಮ್ಮ ದೇಹದ ಸಂಧಿಗಳಲ್ಲಿ ಕಾರ್ಟಿಲೇಜ್ ಕ್ಷಯಿಸುವುದರಿಂದಲೇ ಸಂಧಿವಾತ ಕಾಣಿಸಿಕೊಳ್ಳುತ್ತದೆ. ಆದರೆ ಸಾಮಾನ್ಯವಾಗಿ ಸಂಧಿಗಳಲ್ಲಿ ಉಂಟಾಗುವ ಎಲ್ಲ ಬಗೆಯ ನೋವುಗಳನ್ನು ಕೂಡ ಸಂಧಿವಾತ ಎಂದೇ ಕರೆಯುವ ರೂಢಿಯಿದೆ.
ಸಂಧಿವಾತ ವಂಶಪಾರಂಪರ್ಯವಾಗಿ ಬರುತ್ತದೆ ಎಂಬ ತಪ್ಪು ನಂಬಿಕೆಯಿದೆ. ಆದರೆ ವಂಶಪಾರಂಪರ್ಯವಾಗಿ ಬಂದಿರುವ ಎಲುಬುಗಳ ಕೆಲವು ಬಗೆಯ ಆಕಾರಗಳಿಂದಾಗಿ ಸಂಧಿಗಳ ಮೇಲೆ ಹೆಚ್ಚು ಒತ್ತಡ ಉಂಟಾಗಿ ಸಮಸ್ಯೆಗೆ ಕಾರಣವಾಗಬಹುದು. ನಮ್ಮ ರೋಗ ನಿರೋಧಕ ಶಕ್ತಿಯ ತಪ್ಪು ಚಟುವಟಿಕೆಯಿಂದಾಗಿ ಸಂಧಿಗಳ ಮೇಲೆ ಪ್ರತಿಕೂಲ ಪರಿಣಾಮಗಳು ಉಂಟಾಗುತ್ತವೆ – ಇದು ಕೂಡ ಒಂದು ಮುಖ್ಯ ಕಾರಣ. ಆದರೆ ರುಮಟಾಲಜಿ ಕ್ಷೇತ್ರದಲ್ಲಿ ಆಗಿರುವ ಪ್ರಗತಿಯಿಂದಾಗಿ ಬಹುತೇಕ ಇಂತಹ ಸಮಸ್ಯೆಗಳಿಗೆ ಚಿಕಿತ್ಸೆ ನೀಡಬಹುದಾಗಿದೆ.
Related Articles
Advertisement
ವ್ಯಾಯಾಮಗಳು ಸಂಧಿಗಳ ಮೇಲೆ ಒತ್ತಡ, ಗಾಯ ಉಂಟುಮಾಡುವ ಸಾಧ್ಯತೆಗಳು ಇವೆಯಾದ್ದರಿಂದ ಎಲ್ಲರಿಗೂ ಇವು ಸೂಕ್ತವಲ್ಲ. ಈ ಹಿನ್ನೆಲೆಯಲ್ಲಿ ಕ್ರೀಡಾ ಗಾಯ ವಿಶೇಷ ತಜ್ಞರು ಅಥವಾ ಫಿಸಿಯೋಥೆರಪಿಸ್ಟ್ ರಿಂದ ಸಲಹೆ ಪಡೆಯುವುದು ಸೂಕ್ತ. ದಿನಂಪ್ರತಿಯ ಸಹಜ ಚಟುವಟಿಕೆಗಳು ಮತ್ತು ಕೆಲಸ ಕಾರ್ಯಗಳ ಸಂದರ್ಭದಲ್ಲಿ ಉಂಟಾಗುವ ಸಣ್ಣಪುಟ್ಟ ಗಾಯಗಳನ್ನು ನಿರ್ಲಕ್ಷಿಸುವವರಲ್ಲಿ ನಿಲ್ಲುವ, ಕುಳಿತುಕೊಳ್ಳುವ ಭಂಗಿಗಳಲ್ಲಿ ಸಮಸ್ಯೆಗಳು ಸಾಮಾನ್ಯವಾಗಿರುತ್ತವೆ. ಒಂದು ತಿಂಗಳಿಗಿಂತ ಅಧಿಕ ಕಾಲ ಸಂಧಿ ನೋವು ಮುಂದುವರಿದರೆ ಅದು ಗಾಯ ಗುಣವಾಗುತ್ತಿಲ್ಲ ಎಂಬುದರ ಸೂಚನೆಯಾಗಿದ್ದು, ಅದನ್ನು ನಿರ್ಲಕ್ಷಿಸಬಾರದು.
ವ್ಯಾಯಾಮ ತರಬೇತುದಾರರು ಅಥವಾ ಭಂಗಿ ಯಾ ನಡಿಗೆಯ ಶೈಲಿಯನ್ನು ತಪಾಸಣೆ ನಡೆಸುವ ವಿಚಾರದಲ್ಲಿ ಸೂಕ್ತ ಅರ್ಹತೆ ಹೊಂದಿರುವ ಯಾರನ್ನಾದರೂ ಸಂಪರ್ಕಿಸಿ ಸಮಾಲೋಚಿಸುವುದು ಉತ್ತಮ. ಇದೇರೀತಿ, ಯಾವುದಾದರೂ ಸಮಸ್ಯೆ ಅಂತರ್ಗತವಾಗಿದ್ದರೆ ರುಮಟಾಲಜಿಸ್ಟ್ ಅದನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆಯನ್ನು ಶಿಫಾರಸು ಮಾಡಬಲ್ಲರು. ಇಂತಹ ಸಮಸ್ಯೆಗಳನ್ನು ಆದಷ್ಟು ಬೇಗನೆ ಪತ್ತೆಹಚ್ಚಿ ಚಿಕಿತ್ಸೆ ಪಡೆಯುವುದು ಸೂಕ್ತ, ಏಕೆಂದರೆ ಆಗ ಇಂತಹ ಸಮಸ್ಯೆಗಳನ್ನು ಸಂಪೂರ್ಣವಾಗಿ ಪರಿಹರಿಸಬಹುದಾಗಿರುತ್ತದೆ.
ಸಂಧಿವಾತದ ಯಾಂತ್ರಿಕ ಕಾರಣಗಳನ್ನು ಮೊಣಕಾಲು ಸಂಧಿಯಲ್ಲಿ ಪತ್ತೆ ಮಾಡಬಹುದಾಗಿದ್ದು, ಮೊಣಕಾಲು ಸಂಧಿಯ ತಜ್ಞರು ಈ ವಿಚಾರದಲ್ಲಿ ಸಹಾಯ ಮಾಡಬಲ್ಲರು.
ವೈದ್ಯಕೀಯ ಸಮಾಲೋಚನೆಯ ಆರಂಭಿಕ ಹಂತದಲ್ಲಿಯೇ ಸ್ಕ್ಯಾನ್‌ಗಳನ್ನು ನಡೆಸುವುದು ಇತ್ತೀಚೆಗಿನ ದಿನಗಳಲ್ಲಿ ಒಂದು ಫ್ಯಾಶನ್ ಆಗುತ್ತಿದೆ. ಸೂಕ್ಷ್ಮ, ಅಸ್ಪಷ್ಟ ಗಾಯಗಳನ್ನು ಪತ್ತೆಹಚ್ಚಲು ಇದು ಉತ್ತಮವಾದರೂ ಜನರಲ್ ಸ್ಕ್ಯಾನ್‌ನಿಂದ ಗಮನಾರ್ಹವಲ್ಲದ ಸಮಸ್ಯೆಗಳು ಪತ್ತೆಯಾಗಿ ಆ ಮೂಲಕ ಹೆಚ್ಚು ತೀವ್ರವಾದ ಚಿಕಿತ್ಸೆಗೆ ಕಾರಣವಾಗಬಹುದು; ಆದರೆ ಇದರ ನಡುವೆ ಸಂಧಿಗಳಲ್ಲಿ ಕಾರ್ಟಿಲೇಜ್‌ಗೆ ಸಂಬಂಧಿಸಿದ ಗಮನಾರ್ಹ ಸಮಸ್ಯೆಗಳು ಗಮನಕ್ಕೆ ಬಾರದೆ ಹೋಗಬಹುದು. ಅನೇಕ ಸ್ಕ್ಯಾನ್‌ಗಳು ಕಾರ್ಟಿಲೇಜ್‌ನಲ್ಲಿ ಉಂಟಾದ ಸಣ್ಣಪುಟ್ಟ ಹರಿಯುವಿಕೆಗಳನ್ನು ಕೂಡ ಪತ್ತೆ ಮಾಡಿ ಶಸ್ತ್ರಚಿಕಿತ್ಸೆ ಅಗತ್ಯವೇ ಇಲ್ಲವೇ ಎಂಬ ವಿಚಾರದಲ್ಲಿ ಗೊಂದಲಕ್ಕೆ ಕಾರಣವಾಗಬಹುದು.
ಎಂಆರ್‌ಐಯ ರೋಗಪತ್ತೆ ನಿಖರತೆಯ ವಿಚಾರದಲ್ಲಿ ಸಿದ್ಧ ಪ್ರಮಾದಗಳಾಗುತ್ತವೆ ಎಂಬುದು ಕೂಡ ಗೊತ್ತಿರತಕ್ಕಂತಹ ವಿಷಯವೇ. ಇದರ ಜತೆಗೆ, ಮೊಣಕಾಲು ಸಂಧಿಯ ಯಾಂತ್ರಿಕ ಸಮಸ್ಯೆಗಳಲ್ಲಿ ಬಹುಪಾಲು ಮೇಲ್ಮೆ„ ಕಾರ್ಟಿಲೇಜ್‌ಗೆ ಸಂಬಂಧಪಟ್ಟವುಗಳಾಗಿರುತ್ತವೆ. ಇವುಗಳಲ್ಲಿ ಶೇ. 90ರಷ್ಟು ಎಂಆರ್‌ಐಯಲ್ಲಿ ಪತ್ತೆಯಾಗುವುದಿಲ್ಲ, ಏಕೆಂದರೆ, ಎಂಆರ್‌ಐಯಲ್ಲಿ ಕಾರ್ಟಿಲೇಜ್ ಸೀಕ್ಸೆನ್ಸ್ ಪರಿಗಣಿಸಲಾಗುವುದಿಲ್ಲ. ಹೀಗಾಗಿ ರೋಗಿಯ ಜತೆಗೆ ಸ್ಪೆಶಲಿಸ್ಟ್ ವೈದ್ಯರು ರೋಗಿಯ ಸಂಬಂಧಿತ ಎಲ್ಲ ಸಮಸ್ಯೆಗಳ ಬಗ್ಗೆ ಚರ್ಚಿಸಿ ಆ ಬಳಿಕ ತಪಾಸಣೆ ನಡೆಸುವುದು ಉತ್ತಮ ವಿಧಾನ – ಇದರಿಂದಾಗಿ ತೊಂದರೆಗೀಡಾಗಿರುವ ಅಂಗದ ಕಡೆಗೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತದೆ. ತಜ್ಞ ವೈದ್ಯರು ತಮ್ಮ ತಪಾಸಣೆ ಮತ್ತು ಶಂಕೆಯ ಆಧಾರದಲ್ಲಿ ನಿರ್ದಿಷ್ಟ ಭಾಗದ ಸ್ಕ್ಯಾನಿಂಗ್‌ಗೆ ಆದೇಶಿಸಿ ಅಲ್ಲಿಗೆ ಗಮನ ಕೇಂದ್ರೀಕರಿಸಿ ಆಮೂಲಾಗ್ರವಾಗಿ ಗಮನ ಹರಿಸಲು ಸಾಧ್ಯವಾಗುತ್ತದೆ.
ಕಾರ್ಟಿಲೇಜ್ ಸಮಸ್ಯೆಗಳನ್ನು ನಿವಾರಿಸುವ ವಿಚಾರದಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಗಮನಾರ್ಹ ಪ್ರಗತಿಗಳು ಆಗಿವೆ. ದೇಹದ ಇತರ ಅನೇಕ ಅಂಗಾಂಶಗಳ ಹಾಗೆ ಕಾರ್ಟಿಲೇಜ್ ಅಂಗಾಂಶಗಳು ತಾವೇ ತಾವಾಗಿ ದುರಸ್ತಿ ಹೊಂದುವುದು ಸಾಧ್ಯವಿಲ್ಲದಿದ್ದರೂ ಅವು ಎಲ್ಲಿ ಹಾನಿಗೊಳಗಾಗಿವೆಯೋ ಅಲ್ಲಿ ಅವು ಪುನರುತ್ಥಾನಗೊಳ್ಳಲು ನಾವು ಸಹಾಯ ಮಾಡುವುದು ಸಾಧ್ಯವಿದೆ. ಆಂಶಿಕವಾಗಿ ಹಾನಿಗೀಡಾದ ಅಥವಾ ಸವೆದ ಕಾರ್ಟಿಲೇಜ್‌ಗಳು ಗುಣ ಹೊಂದಲು ಸಂಧಿ ಇಂಜೆಕ್ಷನ್‌ಗಳನ್ನು ನೀಡಬಹುದು. ಪೂರ್ಣ ಹಾನಿಗೀಡಾದ ಕಾರ್ಟಿಲೇಜ್ ಅಂಗಾಂಶಗಳು ಮತ್ತೆ ಬೆಳೆಯುವುದಕ್ಕಾಗಿ ಬೆನ್ನಿನ ದ್ರವದ ಆಕರ ಕೋಶಗಳನ್ನು ನೀಡುವಂತಹ ಹೊಸ ತಂತ್ರಜ್ಞಾನಗಳು ಲಭ್ಯವಿವೆ. ಶಸ್ತ್ರಚಿಕಿತ್ಸೆಯಲ್ಲಿ ಆಗಿರುವ ಬೆಳವಣಿಗೆಗಳಿಂದಾಗಿ ಬೃಹತ್ ಶಸ್ತ್ರಕ್ರಿಯೆ ನಡೆಸದೆ ಕೀಹೋಲ್ ಸರ್ಜರಿಯಂತಹ ಸರಳ, ಸುಲಭ ವಿಧಾನಗಳಿಂದ ಇದನ್ನು ನೆರವೇರಿಸಬಹುದು. ಆದರೆ ಇವೆಲ್ಲ ತಂತ್ರಜ್ಞಾನಗಳು, ಚಿಕಿತ್ಸೆಯ ಯಶಸ್ಸು ರೋಗಿಯು ಸಂಧಿವಾತ ಆರಂಭವಾದ ಬಳಿಕ ಎಷ್ಟು ಬೇಗನೆ ಚಿಕಿತ್ಸೆಗಾಗಿ ಬಂದಿರುತ್ತಾನೆ ಎಂಬುದನ್ನು ಆಧರಿಸಿರುತ್ತದೆ.
ಕಾರ್ಟಿಲೇಜ್‌ಗೆ ಆಗಿರುವ ಭಾರೀ ಹಾನಿಯಿಂದ ತೀವ್ರ ತರಹದ ಸಂಧಿವಾತ ಉಂಟಾದರೆ ಅದನ್ನು ಸಂಧಿ ಪುನರ್‌ಸ್ಥಾಪನೆಯಿಂದ ಮಾತ್ರ ಯಶಸ್ವಿಯಾಗಿ ಚಿಕಿತ್ಸೆಗೆ ಒಳಪಡಿಸಬಹುದು. ಶಸ್ತ್ರಚಿಕಿತ್ಸೆಯ ಬಗ್ಗೆ ಹಿಂಜರಿಕೆ, ಸಾಂಪ್ರದಾಯಿಕ ಕಾರಣಗಳಿಂದಾಗಿ ತಿರಸ್ಕಾರ ಹೊಂದಿರುವ ರೋಗಿಗಳು ಸಂಧಿವಾತ ಉಲ್ಬಣಗೊಂಡ ಹಂತಗಳಲ್ಲಿ ವೈದ್ಯಕೀಯ ಸಹಾಯ ಯಾಚಿಸುತ್ತಾರೆ ಮತ್ತು ಆ ಹಂತದಲ್ಲಿ ಆಕರ ಕೋಶ ಚಿಕಿತ್ಸೆಯಂತಹವು ಗುಣ ನೀಡಬಹುದು ಎಂದು ಅಪೇಕ್ಷಿಸುತ್ತಾರೆ. ಹಾಗೆಯೇ, ಸಂಧಿವಾತದ ಆರಂಭಿಕ ಹಂತಗಳಲ್ಲಿ ವ್ಯಾಯಾಮಗಳನ್ನು ಮಾಡಲು ವೈದ್ಯರು ಸಲಹೆ ನೀಡಿದಾಗ ಅನೇಕ ರೋಗಿಗಳು ಅದನ್ನು ನಿರ್ಲಕ್ಷಿಸುತ್ತಾರೆ. ಇದರಿಂದ ಸಮಸ್ಯೆಯು ನಿಧಾನವಾಗಿ ತೀವ್ರತೆಯ ಹಂತ ತಲುಪುತ್ತದೆ.
ರೋಗಿಗಳು ಮಾರುಕಟ್ಟೆಗಳಲ್ಲಿ ಲಭ್ಯವಿರುವ “ಜಾದೂ ಔಷಧ’ಗಳಿಗೆ ಮಾರು ಹೋಗುವುದೂ ಇದೆ; ಆದರೆ ಅವುಗಳ ಪರಿಣಾಮಕಾರಿತ್ವದ ಬಗ್ಗೆ ಅಗತ್ಯ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ. ಆದ್ದರಿಂದ ಸಂಧಿನೋವು, ಸಂಧಿವಾತ ಸಮಸ್ಯೆಯುಳ್ಳ ಯಾರೇ ಆಗಲಿ, ಅದನ್ನು ಪರಿಹರಿಸಿಕೊಳ್ಳುವಲ್ಲಿ ಪ್ರಾಮುಖ್ಯವಾದುದೆಂದರೆ, ಸರಿಯಾದ ಸಮಯ ಅಂದರೆ ಸಮಸ್ಯೆ ಆರಂಭವಾದ ಬಳಿಕ ಆದಷ್ಟು ಬೇಗನೆ ಸರಿಯಾದ ತಜ್ಞರನ್ನು ಸಂಪರ್ಕಿಸಿ ಸಮಾಲೋಚನೆ ನಡೆಸಿ ಚಿಕಿತ್ಸೆ ಪಡೆದುಕೊಳ್ಳುವುದೇ ಆಗಿದೆ. ಹಾಗೆಯೇ ನಿಷ್ಪಕ್ಷವಾದ, ವೈಜ್ಞಾನಿಕ ತಳಹದಿಯ ಉತ್ತಮ ಚಿಕಿತ್ಸೆ ಎಲ್ಲಿ ಲಭ್ಯ ಎಂಬುದರ ಬಗ್ಗೆ ರೋಗಿಗಳು ಸರಿಯಾದ ಮಾಹಿತಿಯನ್ನು ಹೊಂದಿರುವುದು ಕೂಡ ಅಷ್ಟೇ ಅಗತ್ಯವಾಗಿದೆ.
ಡಾ| ಯೋಗೀಶ್ ಡಿ. ಕಾಮತ್
ಕನ್ಸಲ್ಟಂಟ್ ಸ್ಪೆಶಲಿಸ್ಟ್ ಹಿಪ್ ಮತ್ತು ನೀ ಸರ್ಜನ್
ಕೆಎಂಸಿ ಆಸ್ಪತ್ರೆ, ಮಂಗಳೂರು