Advertisement
ಶ್ರವಣ ಸಾಧನಗಳು ಕಾರ್ಯನಿರ್ವಹಿಸಲು ಆಂತರಿಕ ಎಲೆಕ್ಟ್ರಾನಿಕ್ಸ್ ಅನ್ನು ಹೆಚ್ಚು ಅವಲಂಬಿಸಿವೆ. ಆಧುನಿಕ ಡಿಜಿಟಲ್ ಶ್ರವಣ ಉಪಕರಣಗಳು ಶಬ್ದವನ್ನು ನಿರ್ವಹಿಸಲು ಅತ್ಯಾಧುನಿಕ ಸಿಗ್ನಲ್ ಪ್ರೊಸೆಸಿಂಗ್ ಚಿಪ್ ಅನ್ನು ಬಳಸುತ್ತವೆ.
Related Articles
Advertisement
ನಮ್ಮ ಕರ್ತವ್ಯಗಳೇನು?
ಬೇಸಗೆ ಕಾಲದಲ್ಲಿ ನಾವು ಬೆವರುವುದು ಸಾಮಾನ್ಯ. ಆದ್ದರಿಂದ ಪ್ರತೀ 2 ಗಂಟೆಗಳಿಗೊಮ್ಮೆ ಕಿವಿ, ಕಿವಿಯ ಹಿಂದಿನ ಬೆವರು ಹಾಗೂ ಶ್ರವಣಸಾಧನಗಳನ್ನು ಒರೆಸುತ್ತಿರಬೇಕು. ನೀವು ಹೆಚ್ಚು ಬೆವರುವ ವ್ಯಕ್ತಿಗಳಲ್ಲಿ ಒಬ್ಬರಾದರೆ, ಪ್ರತೀ ಒಂದು ಗಂಟೆಗೊಮ್ಮೆ ಅದನ್ನು ಒರೆಸುತ್ತಿರಬೇಕು. ಬೆವರು ಉಪ್ಪಿನಂಶವನ್ನು ಹೊಂದಿರುವುದರಿಂದ ಅದು ಶ್ರವಣ ಉಪಕರಣದೊಳಗಿನ ಭಾಗಗಳನ್ನು ಹಾಳುಮಾಡುತ್ತದೆ. ಆದ್ದರಿಂದ ಬೆವರು ಶ್ರವಣ ಉಪಕರಣದೊಳಗೆ ಪ್ರವೇಶಿಸದಂತೆ ಖಚಿತಪಡಿಸಿಕೊಳ್ಳಿ.
ನಿಮ್ಮ ಶ್ರವಣ ಉಪಕರಣಗಳನ್ನು ಬಳಸಿ ರಾತ್ರಿ ತೆಗೆದ ಅನಂತರ ಒಣ ಹತ್ತಿ ಉಂಡೆ ಅಥವಾ ಮೃದುವಾದ ಸ್ವತ್ಛ ಬಟ್ಟೆಯಿಂದ ಒರೆಸಬೇಕು ಹಾಗೂ ಮೃದುವಾದ ಹಲ್ಲುಜ್ಜುವ ಬ್ರಷ್ ತೆಗೆದುಕೊಂಡು ಉಪಕರಣದಲ್ಲಿ ಇರಬಹುದಾದ ಯಾವುದೇ ಕುಗ್ಗೆ (ಇಯರ್‌ವ್ಯಾಕ್ಸ್) ಅಥವಾ ಇತರ ವಸ್ತುಗಳನ್ನು ನಿಧಾನವಾಗಿ ತೆಗೆದುಹಾಕಬೇಕು. ರಿಸೀವರ್ ಮತ್ತು ಮೈಕ್ರೊಫೋನ್ ಎರಡನ್ನೂ ಮರೆಯದೇ ಸ್ವತ್ಛಗೊಳಿಸಬೇಕು.
ಶ್ರವಣ ಉಪಕರಣಗಳನ್ನು ಬಳಕೆಯ ಸ್ಥಿತಿಯಲ್ಲಿಡಲು ಉತ್ತಮ ಆಯ್ಕೆಯೆಂದರೆ ಯುವಿ-ಕ್ಲೀನ್ ಮತ್ತು ಡ್ರೆ„ ಬಾಕ್ಸ್. ಉಪಕರಣದ ಬಳಕೆಯ ಅನಂತರ ರಾತ್ರಿಯಿಡೀ ಇದರಲ್ಲಿ ಇಡುವುದರಿಂದ ಈ ಸಾಧನವು ತೇವಾಂಶವನ್ನು ತೆಗೆದುಹಾಕುವುದರ ಜತೆಗೆ, ಯುವಿ ಬೆಳಕಿನ ತರಂಗಗಳ ಬಳಕೆಯ ಮೂಲಕ ಅದನ್ನು ಶುಚಿಗೊಳಿಸಿ, ಸೂಕ್ಷ್ಮ ಜೀವಿಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ.
ಇದರೊಂದಿಗೆ, ಡಿಹ್ಯೂಮಿಡಿಫೈಯರ್ ಕೂಡ ಮತ್ತೂಂದು ಆಯ್ಕೆಯಾಗಿದೆ. ರಾತ್ರಿಯಿಡೀ ಶ್ರವಣ ಉಪಕರಣಗಳನ್ನು ಈ ಸಾಧನದಲ್ಲಿ ಇಟ್ಟಲ್ಲಿ ಯಾವುದೇ ಹೆಚ್ಚುವರಿ ತೇವಾಂಶ ಇದ್ದರೆ ಅದನ್ನು ಇದು ಹೀರಿಕೊಳ್ಳುತ್ತದೆ. ಶ್ರವಣ ಉಪಕರಣಗಳಿಗಾಗಿ ತಯಾರಿಸಿದ ಡಿಹ್ಯೂಮಿಡಿಫೈಯರ್ ಬಾಕ್ಸ್ ಉತ್ತಮ ಆಯ್ಕೆಯಾಗಿದ್ದು, ಇದು ಎಲ್ಲ ವೆಚ್ಚದ ಹಂತಗಳಲ್ಲಿ ಬರುತ್ತದೆ. ಆದರೆ ಇದು ಮುಕ್ತಾಯ ಅವಧಿಯನ್ನು ಹೊಂದಿದೆ. ಕಂಪೆನಿಯ ಆಧಾರದ ಮೇಲೆ ಮುಕ್ತಾಯದ ಅವಧಿ 2-3 ತಿಂಗಳುಗಳು ಅಥವಾ 6 ತಿಂಗಳವರೆಗೆ ಇರಬಹುದು.
ಡ್ರೆ„ಯಿಂಗ್ ಕಿಟ್‌ಗಳು ಎಲೆಕ್ಟ್ರಾನಿಕ್ಸ್ ಅನ್ನು ರಕ್ಷಿಸಲು ಸಿಲಿಕಾ ಜೆಲ್ ಹರಳು ಅಥವಾ ಮೈಕ್ರೋ ಬೀಡ್‌ಗಳನ್ನು ಅವಲಂಬಿಸಿವೆ. ಈ ಹರಳುಗಳು ತೇವಾಂಶವನ್ನು ಹೀರಿಕೊಳ್ಳುತ್ತವೆ. ಒಂದು ನಿರ್ದಿಷ್ಟ ಅವಧಿಯ ಅನಂತರ ಈ ಹರಳುಗಳು ಬಣ್ಣವನ್ನು ಬದಲಾಯಿ ಸುತ್ತವೆ. ಬಣ್ಣವನ್ನು ಬದಲಾಯಿಸಿದ ಅನಂತರ ನೀವು ಅದನ್ನು ಪುನಃ ಸಕ್ರಿಯಗೊಳಿಸಬೇಕಾಗಬಹುದು. ಇದಕ್ಕೆ ಸಂಬಂಧಿತ ಸೂಚನೆಗಳನ್ನು ಆ ಬಾಕ್ಸ್‌ನಲ್ಲಿ ನೀಡಲಾಗುತ್ತದೆ ಅಥವಾ ಇದರ ಬಗ್ಗೆ ನೀವು ನಿಮ್ಮ ಆಡಿಯಾಲಜಿಸ್ಟ್ (ಶ್ರವಣ ತಜ್ಞ)ರೊಂದಿಗೆ ವಿಚಾರಿಸಬಹುದು.
ನಿಮ್ಮ ಮಷೀನನ್ನು ಹಾಕದೆ ಇದ್ದಾಗ ಅಥವಾ ಡ್ರೆ„ಯಿಂಗ್ ಕಿಟ್‌ನಲ್ಲಿ ಇಟ್ಟಾಗ ಬ್ಯಾಟರಿ ಬಾಗಿಲು ತೆರೆಯಲು ಮರೆಯಬೇಡಿ. ನೀವು ಶ್ರವಣ ಸಾಧನವನ್ನು ಕೆಳಗಿಳಿಸುವ ಮೊದಲು ಆ ಬಾಗಿಲನ್ನು ತೆರೆದು ಎಳೆಯುವ ಮೂಲಕ ನೀವು ಬ್ಯಾಟರಿಗಳು ಮತ್ತು ಇತರ ಅಂಶಗಳನ್ನು ಗಾಳಿಗೆ ಒಡ್ಡುತ್ತೀರಿ ಹಾಗೂ ನಿರ್ಮಿಸಿದ ಯಾವುದೇ ಘನೀಕರಣವು ನೈಸರ್ಗಿಕವಾಗಿ ಆವಿಯಾಗಲು ಅನುವು ಮಾಡಿಕೊಡುತ್ತೀರಿ. ಇದನ್ನು ಬೇಸಗೆಗಾಲದಲ್ಲಿ ಮಾತ್ರವಲ್ಲದೆ ವರ್ಷಪೂರ್ತಿ ಅನುಸರಿಸಬೇಕು
ಕ್ಷೇತ್ರ ಅಧ್ಯಯನದ ಪ್ರಕಾರ ರಿಲೇಟಿವ್ ಹ್ಯೂಮಿಡಿಟಿ ಪ್ರಮಾಣ (ಆರ್‌ಎಚ್)ಕ್ಕೂ ಕಿವಿಯ ತಮಟೆಗೆ ಶ್ರವಣ ಸಾಧನದ ರಿಸೀವರ್‌ನ ಸಾಮೀಪ್ಯ ಹಾಗೂ ರಿಸೀವರ್ ಸಂಬಂಧಿತ ಸಮಸ್ಯೆಗಳೊಂದಿಗೆ ಪರಸ್ಪರ ಸಂಬಂಧವಿದೆ. ರಿಲೇಟಿವ್ ಹ್ಯೂಮಿಡಿಟಿ ಪ್ರಮಾಣ (ಆರ್‌ಎಚ್) ಶೇ. 60ಕ್ಕಿಂತ ಹೆಚ್ಚು ಇದ್ದಲ್ಲಿ ರಿಸೀವರ್ ವೈಫಲ್ಯಗಳು ಕಂಡುಬರುತ್ತದೆ ಹಾಗೂ ಶೇ. 40 ಅಥವಾ ಅದಕ್ಕಿಂತ ಕಡಿಮೆ ಪ್ರಮಾಣವಿದ್ದಲ್ಲಿ ರಿಸೀವರ್ ಸಮಸ್ಯೆಗಳು ಕಂಡುಬರುವುದು ವಿರಳ.
ಕಿವಿಯ ಹೊರಗೆ ಧರಿಸುವಂತಹ ಶ್ರವಣ ಉಪಕರಣಗಳಿಗೆ ಹೋಲಿಸಿದರೆ ಕಿವಿಯ ಒಳಗೆ ಧರಿಸುವಂತಹ ಶ್ರವಣ ಉಪಕರಣಗಳ ರಿಸೀವರ್ ಕಿವಿಯ ತಮಟೆಗೆ ಹತ್ತಿರವಾಗಿದ್ದು, ಇದರಲ್ಲಿ ರಿಲೇಟಿವ್ ಹ್ಯೂಮಿಡಿಟಿ ಪ್ರಮಾಣ ಶೇ. 60ಕ್ಕಿಂತ ಹೆಚ್ಚಾಗಿರುತ್ತದೆ. ಹಾಗಾಗಿ ಇದರಲ್ಲಿ ತೇವಾಂಶ ಹಾಗೂ ಕುಗ್ಗೆ (ಇಯರ್‌ವ್ಯಾಕ್ಸ್) ಸಂಬಂಧಿತ ಸಮಸ್ಯೆಗಳು ಸಂಭವಿಸುವುದು ಸರ್ವೇ ಸಾಮಾನ್ಯ. ಹಾಗಾಗಿ ಕಿವಿಯ ಹೊರಗೆ ಧರಿಸುವಂತಹ ಶ್ರವಣ ಸಾಧನಗಳು ಕಿವಿಯ ಒಳಗೆ ಧರಿಸುವಂತಹ ಶ್ರವಣ ಸಾಧನಗಳಿಗಿಂತ ಉತ್ತಮ.
ಸೂಚನೆ: ತೇವಾಂಶದ ಕಾರಣದಿಂದಾಗಿ ಕಿವಿಯ ಉಪಕರಣಗಳು ಕಾರ್ಯವಹಿಸುವುದನ್ನು ತನ್ನಿಂತಾನೇ ತತ್‌ಕ್ಷಣ ಸಂಪೂರ್ಣವಾಗಿ ನಿಲ್ಲಿಸುತ್ತದೆ.
ಹೊರಗಿನ ತೇವಾಂಶದಿಂದ ಶ್ರವಣ ಉಪಕರಣಕ್ಕೆ ಏನು ಹಾನಿಯಾಗಿದೆ ಎಂದು ನಾವು ನೋಡಲು ಸಾಧ್ಯವಿಲ್ಲ. ಕೆಳಗಿನ ಚಿತ್ರವು ಶ್ರವಣ ಸಾಧನದೊಳಗಿನ ಭಾಗಗಳು ಹಾಗೂ ತೇವಾಂಶವು ಶ್ರವಣ ಸಾಧನವನ್ನು ಹೇಗೆ ನಾಶಪಡಿಸುತ್ತದೆ / ಹಾಳುಮಾಡುತ್ತದೆ ಎಂಬುದನ್ನು ತೋರಿಸುತ್ತದೆ.
ತೇವಾಂಶ ಹಾನಿಯಿಂದಾಗಿ ಈ ಕೆಳಗಿನ ಹಾನಿಯುಂಟಾಗಬಹುದು:
ಧ್ವನಿ ವಿರೂಪಗೊಳ್ಳುವುದು
ದೊಡ್ಡ ಶಬ್ದಗಳ ಸಮಯದಲ್ಲಿ ಧ್ವನಿ ಕಡಿತಗೊಳ್ಳುವುದು
ಒಳಗೆ ಮತ್ತು ಹೊರಗೆ ಧ್ವನಿ ಮಸುಕಾಗುವುದು
ಶ್ರವಣ ಉಪಕರಣವು ಬಿಟ್ಟು ಬಿಟ್ಟು ಕಾರ್ಯ ನಿರ್ವಹಿಸುವುದು
ನೂತನ್ ಎನ್. ಕಾಮತ್
ಚಿನ್ಮಯಿ ಕಾಮತ್
ಇಂಟರ್ನ್
ಡಾ| ಕಿಶನ್ ಎಂ.ಎಂ.
ಅಸೋಸಿಯೇಟ್ ಪ್ರೊಫೆಸರ್,
ಸ್ಪೀಚ್ ಅಂಡ್ ಹಿಯರಿಂಗ್ ವಿಭಾಗ, ಎಂಸಿಎಚ್ಪಿ, ಮಣಿಪಾಲ