Advertisement

Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್‌ ಅಸ್ತ್ರ !

04:13 PM Nov 18, 2024 | Team Udayavani |

ಹೊಸದಿಲ್ಲಿ: ಭಾರತದ ಸೇನಾ ಶಕ್ತಿಗೆ ದೊಡ್ಡಮಟ್ಟದ ಬಲ ನೀಡುವಂತೆ ಈಗ ಸೇನೆಯ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್‌ ಅಸ್ತ್ರ ಸೇರ್ಪಡೆಗೊಂಡಿದೆ. ಇದೇ ಮೊದಲ ಬಾರಿಗೆ ಭಾರತವು ದೀರ್ಘ‌ವ್ಯಾಪ್ತಿಯ ಹೈಪರ್‌ಸಾನಿಕ್‌ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನೆರವೇರಿಸಿದೆ. ಈ ಮೂಲಕ ಎಲ್ಲ ರೀತಿಯ ವೈಮಾನಿಕ ರಕ್ಷಣ ವ್ಯವಸ್ಥೆಯ ಕಣ್ಣು ತಪ್ಪಿಸಿ, ಗರಿಷ್ಠ ವೇಗದಲ್ಲಿ ಗುರಿಯನ್ನು ಛೇದಿಸುವಂಥ ಕ್ಷಿಪಣಿಗಳನ್ನು ಹೊಂದಿರುವ ಕೆಲವೇ ದೇಶಗಳ ಸಾಲಿಗೆ ಭಾರತ ಸೇರ್ಪಡೆಗೊಂಡಿದೆ.

Advertisement

ರಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿರುವ ಈ ಕ್ಷಿಪಣಿಯು ವಿವಿಧ ಪೇಲೋಡ್‌ಗಳನ್ನು ಹೊತ್ತು 1,500 ಕಿ.ಮೀ.ಗಿಂತಲೂ ಹೆಚ್ಚು ದೂರ ಕ್ರಮಿಸಬಲ್ಲ ಸಾಮರ್ಥ್ಯ ಹೊಂದಿದೆ. ಒಡಿಶಾ ಕರಾವಳಿಯಾಚೆಗಿನ ಡಾ| ಎಪಿಜೆ ಅಬ್ದುಲ್‌ ಕಲಾಂ ದ್ವೀಪದಲ್ಲಿ ಶನಿವಾರ ರಾತ್ರಿ ಇದರ ಪ್ರಯೋಗ ನಡೆದಿದೆ.

ಸಾಮಾನ್ಯವಾಗಿ ಸ್ಫೋಟಕಗಳು ಅಥವಾ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೂಯ್ಯಬಲ್ಲ ಹೈಪರ್‌ಸಾನಿಕ್‌ ಕ್ಷಿಪಣಿಗಳು ಶಬ್ದದ ವೇಗಕ್ಕಿಂತ (ಮ್ಯಾಕ್‌ 5 ಅಂದರೆ ತಾಸಿಗೆ 6,125 ಕಿ.ಮೀ.) 5 ಪಟ್ಟು ವೇಗದಲ್ಲಿ ಸಂಚರಿಸುತ್ತವೆ. ಹೈಪರ್‌ ಸಾನಿಕ್‌ ಕ್ಷಿಪಣಿಗಳ ಸುಧಾರಿತ ಆವೃತ್ತಿಗಳು ತಾಸಿಗೆ 24,140 ಕಿ.ಮೀ. (ಮ್ಯಾಕ್‌ 20) ವರೆಗೂ ಸಂಚರಿಸಬಲ್ಲವು. ಆತ್ಮನಿರ್ಭರ ಧ್ಯೇಯದಡಿ ಇದನ್ನು ನಿರ್ಮಿಸಲಾಗಿದೆ.

ಈ ವೇಗವನ್ನು ಪತ್ತೆಹಚ್ಚಲು, ಛೇದಿಸಲು ಕ್ಷಿಪಣಿ ನಿಗ್ರಹ ವ್ಯವಸ್ಥೆಗಳಿಗೆ ಸಾಧ್ಯವಾಗದು. ಈ ಐತಿಹಾಸಿಕ ಸಾಧನೆ ಬಗ್ಗೆ ಪ್ರತಿಕ್ರಿಯಿಸಿರುವ ರಕ್ಷಣ ಸಚಿವ ರಾಜನಾಥ್‌ ಸಿಂಗ್‌, ಭಾರತದ ಮೊತ್ತಮೊದಲ ದೀರ್ಘ‌ವ್ಯಾಪ್ತಿಯ ಹೈಪರ್‌ಸಾನಿಕ್‌ ಕ್ಷಿಪಣಿಯ ಯಶಸ್ವಿ ಪರೀಕ್ಷೆಯು ಒಂದು ಅತ್ಯದ್ಭುತ ಹಾಗೂ ಐತಿಹಾಸಿಕ ಸಾಧನೆಯಾಗಿದೆ. ಇದರ ಮೂಲಕ ಭಾರತವು ಇಂಥ ಶಸ್ತ್ರಾಸ್ತ್ರ ವ್ಯವಸ್ಥೆ ಹೊಂದಿರುವ ಆಯ್ದ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಹೈಪರ್‌ಸಾನಿಕ್‌ ಹೊಂದಿರುವ 4ನೇ ರಾಷ್ಟ್ರ ಭಾರತ
ಪ್ರಸ್ತುತ ರಷ್ಯಾ, ಚೀನ ಮತ್ತು ಅಮೆರಿಕಗಳು ಹೈಪರ್‌ಸಾನಿಕ್‌ ಕ್ಷಿಪಣಿ ಗಳನ್ನು ಹೊಂದಿದ್ದು, ಭಾರತವೂ ಯಶಸ್ವಿಯಾಗಿ ಪರೀಕ್ಷಾರ್ಥ ಪ್ರಯೋಗ ನಡೆಸುವ ಮೂಲಕ ಈ ಅಸ್ತ್ರ ಹೊಂದಿರುವ ಜಗತ್ತಿನ 4ನೇ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಫ್ರಾನ್ಸ್‌, ಜರ್ಮನಿ, ಆಸ್ಟ್ರೇಲಿಯಾ, ಜಪಾನ್‌, ಇರಾನ್‌ ಮತ್ತು ಇಸ್ರೇಲ್‌ ಕೂಡ ಹೈಪರ್‌ಸಾನಿಕ್‌ ಕ್ಷಿಪಣಿ ವ್ಯವಸ್ಥೆಗಳನ್ನು ಅಭಿವೃದ್ಧಿ
ಪಡಿಸುವ ಯೋಜನೆಗಳನ್ನು ಹಾಕಿಕೊಂಡಿವೆ.

Advertisement

ಉಪಯೋಗವೇನು?

* ಶಬ್ದಕ್ಕಿಂತ 5 ಪಟ್ಟು ವೇಗ ಇರುವ ಕಾರಣ ಇದನ್ನು ಪತ್ತೆಹಚ್ಚಲು, ಛೇದಿಸಲು ಕ್ಷಿಪಣಿ ನಿಗ್ರಹ ವ್ಯವಸ್ಥೆಗಳಿಗೆ ಸಾಧ್ಯವಾಗದು

* ಅತ್ಯಧಿಕ ವೇಗ ಮತ್ತು ಕುಶಲ ಚಲನೆಯಿಂದಾಗಿ ಗುರಿಯನ್ನು ನಿಖರವಾಗಿ ತಲುಪಬಲ್ಲುದು

* ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತು 1,500 ಕಿ.ಮೀ.ಗಿಂತಲೂ ಹೆಚ್ಚು ದೂರ ಕ್ರಮಿಸಬಲ್ಲುದು

* ಶತ್ರುದೇಶದ ಮೇಲೆ ಕ್ಷಣಮಾತ್ರದಲ್ಲಿ ದಾಳಿ ನಡೆಸಲು ಸಾಧ್ಯ

ಏನಿದು ಹೈಪರ್‌ಸಾನಿಕ್‌ ಕ್ಷಿಪಣಿ?
* ಶಬ್ದದ ವೇಗಕ್ಕಿಂತ 5 ಪಟ್ಟು ವೇಗದಲ್ಲಿ (ತಾಸಿಗೆ 6,125 ಕಿ.ಮೀ.) ಚಲಿಸುವ ಕ್ಷಿಪಣಿಯನ್ನು ಹೈಪರ್‌ಸಾನಿಕ್‌ ಕ್ಷಿಪಣಿ ಎನ್ನುತ್ತಾರೆ.

* ಇದರಲ್ಲಿ ಏರೋಡೈನಾಮಿಕ್‌ ಲಿಫ್ಟ್ ಬಳಕೆಯಾಗುವ ಕಾರಣ ಬ್ಯಾಲಿಸ್ಟಿಕ್‌ ಕ್ಷಿಪಣಿಗಳಿಗೆ ಹೋಲಿಸಿದರೆ ಇದರ ಸಾಮರ್ಥ್ಯ ಬಹಳಷ್ಟು ಹೆಚ್ಚು.

* ಏರೋಡೈನಾಮಿಕ್‌ ಲಿಫ್ಟ್ನ ಮಾರ್ಗದರ್ಶನದಲ್ಲಿ ಸಂಚರಿಸುವ ಕಾರಣ ಅತ್ಯಂತ ವೇಗವಾಗಿ ಇದು ನಿಖರ ಗುರಿ ತಲುಪಬಲ್ಲುದು.

* ಹೀಗಾಗಿ ಕ್ಷಿಪಣಿ ರಕ್ಷಣ ವ್ಯವಸ್ಥೆಗೆ ಕೂಡ ಇವುಗಳನ್ನು ಪತ್ತೆಹಚ್ಚಿ ಹೊಡೆದುರುಳಿಸಲು ಕಷ್ಟಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next