Advertisement
ಪ್ರಶ್ನೆ ಪತ್ರಿಕೆ ಸೋರಿಕೆ ಎನ್ನುವುದು ಈಗ ಮಾಮೂಲು ಪಿಡುಗಾಗಿ ಹೋಗಿದೆ. ಈಗ ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಪರೀಕ್ಷೆ ನಡೆಸುವುದೇ ಒಂದು ಭಾರೀ ಸವಾಲಿನ ಕೆಲಸ ಎನ್ನುವಂತಾಗಿದೆ. ಒಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸುವುದೆಂದರೆ ಯುದ್ಧಕ್ಕೆ ನಡೆಸುವಂತಹ ತಯಾರಿಯನ್ನು ನಡೆಸಬೇಕಾಗಿದೆ. ಇದೀಗ ರವಿವಾರ ನಡೆದ ಸೇನಾ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಈ ಸಾಲಿಗೆ ಇನ್ನೊಂದು ಸೇರ್ಪಡೆ. ದೇಶಾದ್ಯಂತ 52 ಕೇಂದ್ರಗಳಲ್ಲಿ ಸೇನೆಗೆ ಗುಮಾಸ್ತರು, ಸ್ಟ್ರಾಂಗ್‌ಮ್ಯಾನ್ ಮತ್ತು ಟ್ರೇಡ್ಸ್‌ಮ್ಯಾನ್‌ಗಳನ್ನು ನೇಮಿಸಿಕೊಳ್ಳುವ ಸಲುವಾಗಿ ಪರೀಕ್ಷೆ ನಡೆಸಲಾಗಿತ್ತು. ಪುಣೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾದ ಮಾಹಿತಿ ಸಿಕ್ಕಿದ ಬಳಿಕ ಮಹಾರಾಷ್ಟ್ರ ಮತ್ತು ಗೋವಾ ಒಳಗೊಂಡಿರುವ ಪಶ್ಚಿಮ ಭಾರತದ ಆರು ಕೇಂದ್ರಗಳ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. 18 ಮಂದಿಯನ್ನು ಸೋರಿಕೆಗೆ ಸಂಬಂಧಿಸಿ ಬಂಧಿಸಲಾಗಿದೆ ಹಾಗೂ 300ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ವಿಚಾರಣೆಗೊಳಪಡಿಸಲಾಗಿದೆ. ಕೋಚಿಂಗ್ ಕ್ಲಾಸ್‌ಗಳೇ ಪ್ರಶ್ನೆಪತ್ರಿಕೆಯನ್ನು ವಿದ್ಯಾರ್ಥಿಗಳಿಗೆ ನೀಡಿವೆ ಹಾಗೂ ಕೆಲವೆಡೆಗಳಲ್ಲಿ ಸೇನೆಯ ಉದ್ಯೋಗಿಗಳೇ ಹೊಟೇಲುಗಳಲ್ಲಿ ಕುಳಿತು ಉತ್ತರ ಬರೆದಿದ್ದಾರೆ ಎನ್ನಲಾಗಿದೆ. ಅತ್ಯಂತ ಹೆಚ್ಚು ಶಿಸ್ತು ಮತ್ತು ದಕ್ಷತೆ ಬಯಸುವ ಸೇನೆಯಲ್ಲಿ ಈ ಪರಿಯ ಭ್ರಷ್ಟಾಚಾರ ಇದೆ ಎನ್ನುವುದು ಗಂಭೀರವಾಗಿ ಪರಿಗಣಿಸಬೇಕಾದ ವಿಚಾರ.
ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದೆ ವ್ಯವಸ್ಥಿತವಾದ ಜಾಲ ಕಾರ್ಯವೆಸಗುತ್ತಿದೆ. ಕೆಲವೊಮ್ಮೆ ಪ್ರಶ್ನೆಪತ್ರಿಕೆಗಳು ಮುದ್ರಣವಾಗುತ್ತಿರುವಾಗಲೇ ಜಾಲದ ಕೈಸೇರಿರುತ್ತದೆ. ಈ ಜಾಲ ರಾಜಕಾರಣಿಗಳ ಮತ್ತು ಉನ್ನತ ಅಧಿಕಾರಿಗಳ ನಂಟು ಹೊಂದಿರುತ್ತದೆ. ಆದರೆ ಸಿಕ್ಕಿ ಬೀಳುವುದು ಚಿಲ್ಲರೆ ಅಪರಾಧಿಗಳು ಮಾತ್ರ. ಹೀಗಾಗಿ ಪ್ರತಿವರ್ಷ ಸೋರಿಕೆ ಎನ್ನುವುದು ಮರುಕಳಿಸುತ್ತಲೇ ಇರುತ್ತದೆ. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವುದು ಮತ್ತು ಅದರ ಫಲಾನುಭವಿಯಾಗುವುದು ಜಾಮೀನು ರಹಿತ ಅಪರಾಧ ಎಂದು ಪರಿಗಣಿಸುವ ಕಠಿಣ ಕಾನೂನು ರಚಿಸುವ ಅಗತ್ಯವಿದೆ. ಇದಕ್ಕೂ ಮಿಗಿಲಾಗಿ ನಮ್ಮ ಪರೀಕ್ಷಾ ವ್ಯವಸ್ಥೆಯಲ್ಲಿ ಸಮಗ್ರವಾದ ಸುಧಾರಣೆಗಳಾಗಬೇಕು. ಪರೀಕ್ಷೆಗಳು ನೆನಪಿನ ಶಕ್ತಿಯನ್ನು ಅಳೆಯುವ ಮಾನದಂಡವಾಗುವ ಬದಲು ಅಭ್ಯರ್ಥಿಯ ನೈಜ ಸಾಮರ್ಥ್ಯವನ್ನು ಪರೀಕ್ಷಿಸುವ ಅಳತೆಗೋಳಾಗಬೇಕು.