ನವದೆಹಲಿ:ಜಮ್ಮು-ಕಾಶ್ಮೀರ ಮತ್ತು ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಕೇಂದ್ರ ಸರಕಾರ ಘೋಷಿಸಿದ ಒಂದು ತಿಂಗಳ ಬಳಿಕ ಇದೀಗ ವಿಶ್ವದ ಅತ್ಯಂತ ಎತ್ತರದ ಯುದ್ಧಭೂಮಿ ಸಿಯಾಚಿನ್ ಗ್ಲೇಸಿಯರ್ ಪ್ರದೇಶಕ್ಕೆ ಜನಸಾಮಾನ್ಯರಿಗೂ ಪ್ರವೇಶ ನೀಡಲು ಸಿದ್ಧತೆ ನಡೆಸಿದೆ ಎಂದು ವರದಿ ತಿಳಿಸಿದೆ.
ಜಗತ್ತಿನ ಅತ್ಯಂತ ಎತ್ತರದ ಯುದ್ಧಭೂಮಿ, ಅಪಾಯಕಾರಿ ಹವಾಮಾನದಲ್ಲಿ ಭಾರತೀಯ ಸೇನೆ ಎಂತಹ ಸವಾಲನ್ನು ಮತ್ತು ಕಠಿಣ ಪರಿಸ್ಥಿತಿ ಎದುರಿಸುತ್ತಿದೆ ಎಂಬುದನ್ನು ಜನಸಾಮಾನ್ಯರು ನೋಡಿ ತಿಳಿದುಕೊಳ್ಳುವಂತಾಗಬೇಕು ಎಂಬುದಾಗಿ ಸೇನಾ ಮೂಲಗಳು ತಿಳಿಸಿರುವುದಾಗಿ ವರದಿ ವಿವರಿಸಿದೆ.
ಸಿಯಾಚಿನ್ ಗ್ಲೇಸಿಯರ್ ಪ್ರದೇಶಕ್ಕೆ ಜನಸಾಮಾನ್ಯರಿಗೂ ಭೇಟಿ ನೀಡಲು ಅವಕಾಶ ಕಲ್ಪಿಸಿಕೊಡುವುದರ ಮೂಲಕ ಸೇನಾ ಜೀವನ ಮತ್ತು ಅವರ ಕರ್ತವ್ಯ ನಿಷ್ಠೆ ಬಗ್ಗೆ ಇನ್ನಷ್ಟು ಮಾಹಿತಿ ದೊರಕಿದಂತಾಗುತ್ತದೆ ಎಂದು ಭಾರತೀಯ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ಸೇನಾ ಮೂಲ ತಿಳಿಸಿದೆ.
ಸೇನಾ ತರಬೇತಿ ಘಟಕಕ್ಕೆ ಭೇಟಿ ನೀಡಲು ಸೇನೆ ಈಗಾಗಲೇ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿದೆ. ಇದೀಗ ಸಿಯಾಚಿನ್ ಗ್ಲೇಸಿಯರ್ ನಂತಹ ಅತೀ ಎತ್ತರದ ಪ್ರದೇಶಗಳಿಗೂ ಭೇಟಿ ನೀಡಲು ಸಾರ್ವಜನಿಕರಿಗೂ ಅವಕಾಶ ಕಲ್ಪಿಸಿಕೊಡಬೇಕು ಎಂದು ರಾವತ್ ಅವರು ಇತ್ತೀಚೆಗೆ ಸೆಮಿನಾರ್ ವೊಂದರಲ್ಲಿ ಹೇಳಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಸಿಯಾಚಿನ್ ಗ್ಲೇಸಿಯರ್ ಪ್ರದೇಶ ಹಾಗೂ ಸುತ್ತಮುತ್ತ ಪ್ರದೇಶಗಳಿಗೆ ಸಾರ್ವಜನಿಕರ ಭೇಟಿಗೆ ಸೇನೆ ಅವಕಾಶ ನೀಡುತ್ತಿರಲಿಲ್ಲವಾಗಿತ್ತು. ಇದೀಗ ಎತ್ತರದ ಯುದ್ಧಭೂಮಿ ಸಿಯಾಚಿನ್ ನಲ್ಲಿ ಹೇಗೆ ಕಾರ್ಯನಿರ್ವಹಿಸಲಾಗುತ್ತಿದೆ ಎಂಬುದನ್ನು ವೀಕ್ಷಿಸಲು ಲಡಾಖ್ ನ ಸಾಮಾನ್ಯ ಜನರಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದೆ.