ಶ್ರೀನಗರ : ಈ ವಾರದ ಆದಿಯಲ್ಲಿ ಇಲ್ಲಿನ ಹೊಟೇಲ್ ಒಂದರ ರಿಸೆಪ್‌ಶನ್ ಕೌಂಟರ್‌ನಲ್ಲಿ ಮಾತಿನ ಜಗಳ ತೆಗೆದು 18ರ ಹರೆಯದ ಹುಡುಗಿಯ ಸಂಗಡ ಹೊಟೇಲ್ ಪ್ರವೇಶಿಸಲು ಯತ್ನಿಸಿದ ಆರೋಪದ ಮೇಲೆ ಪೊಲೀಸರ ವಶಕ್ಕೆ ಗುರಿಯಾಗಿದ್ದ ಮೇಜರ್ ನಿತಿನ್ ಲೀತುಲ್ ಗೊಗೋಯಿ ವಿರುದ್ಧ ಸೇನೆ ಕೋರ್ಟ್ ಆಫ್ ಇನ್‌ಕ್ವಯರಿ ಆದೇಶಿಸಿದೆ.
ಈ ತನಿಖೆಯಲ್ಲಿ ಕಂಡು ಬರುವ ಅಂಶಗಳನ್ನು ಆಧರಿಸಿಕೊಂಡು ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇಜರ್ ಗೊಗೋಯಿ ಅಪರಾಧ ಎಸಗಿರುವುದು ಸಾಬೀತಾದಲ್ಲಿ ಅವರಿಗೆ ಕಠಿನ ಶಿಕ್ಷೆ ನೀಡಲಾಗುವುದು ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಪೆಹಲ್‌ಗಾಂವ್‌ನಲ್ಲಿ ನಡೆದಿದ್ದ ಸೇನಾ ಸದ್ಭಾವನಾ ಶಾಲೆಯ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.