Advertisement

ಥಿಯೇಟರ್‌ ಕಮಾಂಡ್‌ ರಚನೆಗೆ ಅಂತಿಮ ಪ್ರಸ್ತಾವನೆ ಆಹ್ವಾನ

07:27 PM Nov 21, 2021 | Team Udayavani |

ನವದೆಹಲಿ: ದೇಶದ ಸೇನೆಯ ಆಧುನೀಕರಣಕ್ಕೆ ಸಂಬಂಧಿಸಿದಂತೆ ಥಿಯೇಟರ್‌ ಕಮಾಂಡ್‌ ರಚನೆ ನಿಟ್ಟಿನಲ್ಲಿ ಭೂಸೇನೆ, ನೌಕಾಪಡೆ, ಭಾರತೀಯ ವಾಯುಪಡೆಯಿಂದ ಅಂತಿಮ ಹಂತದ ಪ್ರಸ್ತಾವನೆ ಆಹ್ವಾನಿಸಲಾಗಿದೆ.

Advertisement

ರಕ್ಷಣಾ ಪಡೆಗಳ ಮುಖ್ಯಸ್ಥ ಜ.ಬಿಪಿನ್‌ ರಾವತ್‌ ಕಚೇರಿಯ ವ್ಯಾಪ್ತಿಯಲ್ಲಿರುವ ಮಿಲಿಟರಿ ವ್ಯವಹಾರಗಳ ವಿಭಾಗವು ಈ ಬಗ್ಗೆ ಸೇನೆಯ ಮೂರು ವಿಭಾಗಗಳ ಪ್ರಧಾನ ಕಚೇರಿಗೆ ಆರು ತಿಂಗಳ ಕಾಲಾವಕಾಶ ನೀಡಿದೆ.

ಅಂದರೆ 2022ರ ಜೂನ್‌ ವೇಳೆ, ತಮ್ಮ ಅಭಿಪ್ರಾಯ ಸಲ್ಲಿಸುವಂತೆ ಸೂಚಿಸಿದೆ.

ಸೇನೆಯ ಮೂರು ವಿಭಾಗಗಳು ಮುಂದಿನ ಆರು ತಿಂಗಳ ಒಳಗಾಗಿ ಸಲಹೆ- ಆಕ್ಷೇಪಗಳನ್ನು ಸಲ್ಲಿಕೆ ಮಾಡಿದ ಬಳಿಕ ಅದನ್ನು ಪರಿಶೀಲಿಸಲಾಗುತ್ತದೆ. 2022ರ ಮುಕ್ತಾಯದ ಒಳಗಾಗಿ ದೇಶದಲ್ಲಿಯೂ ಕೂಡ ಥಿಯೇಟರ್‌ ಕಮಾಂಡ್‌ ಅನ್ನು ಪ್ರಾರಂಭಿಸಲು ಆದ್ಯತೆ ನೀಡಲಾಗುತ್ತದೆ.

ಭಾರತೀಯ ನೌಕಾಪಡೆಯನ್ನು ಪಶ್ಚಿಮ ಮತ್ತು ಪೂರ್ವ ಕಮಾಂಡ್‌ ಎಂದು ವಿಭಜಿಸಲಾಗಿದ್ದು, ನೌಕಾಪಡೆ ಮುಖ್ಯಸ್ಥರ ನೇತೃತ್ವದಲ್ಲಿದೆ. ಮುಂದಿನ ದಿನಗಳಲ್ಲಿ ಅತ್ಯಂತ ಮಹತ್ವದ್ದು ಎಂದು ಹೇಳಲಾಗಿರುವ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಸಮೂಹಕ್ಕೇ ಪ್ರತ್ಯೇಕ ವಿಭಾಗ ರಚಿಸಲಾಗಿದ್ದು, ಅದಕ್ಕೆ ಒಬ್ಬ ಕಮಾಂಡರ್‌ ಅವರನ್ನು ನಿಯೋಜಿಸಲಾಗಿದೆ. ಅವರು ರಕ್ಷಣಾ ಪಡೆಗಳ ಮುಖ್ಯಸ್ಥರಿಗೆ ನೇರ ವರದಿ ಮಾಡುತ್ತಾರೆ.

Advertisement

ಲಕ್ನೋ ಕೇಂದ್ರ ಸ್ಥಾನ:
ಉತ್ತರಾಖಂಡ, ಹಿಮಾಚಲ ಪ್ರದೇಶವನ್ನು ಉತ್ತರ ಪ್ರದೇಶ ರಾಜಧಾನಿ ಲಕ್ನೋದಲ್ಲಿ ಪ್ರಧಾನ ಕಚೇರಿ ಹೊಂದಿರುವ ಸೆಂಟ್ರಲ್‌ ಆರ್ಮಿ ಕಮಾಂಡ್‌ ವ್ಯಾಪ್ತಿಗೆ ಬರಲಿದೆ. ಈ ಕೇಂದ್ರಕ್ಕೆ ಲೆ.ಜ . ವೈ.ದಿಮಿರಿ ಅವರು ಮುಖ್ಯಸ್ಥರಾಗಲಿದ್ದಾರೆ. ಹೀಗಾಗಿ, ಪಶ್ಚಿಮ ಥಿಯೇಟರ್‌ ಕಮಾಂಡ್‌ಗೆ ಚೀನಾ ಗಡಿಯ ಹೊಣೆ ಮುಂದಿನ ದಿನಗಳಲ್ಲಿ ಕಡಿಮೆಯಾಗಲಿದೆ. ಹಿಮಾಚಲ ಪ್ರದೇಶಗಳಿಂದ ಅರುಣಾಚಲ ಪ್ರದೇಶದ ವ್ಯಾಪ್ತಿಯ ವರೆಗಿನ ಚೀನಾ ಗಡಿ ಸಹಿತ ಪ್ರದೇಶಗಳನ್ನು ಸೆಂಟ್ರಲ್‌ ಆರ್ಮಿ ಕಮಾಂಡ್‌ ನಿರ್ವಹಿಸಲಿದೆ.

ಇದನ್ನೂ ಓದಿ:ಸತ್ತ ವ್ಯಕ್ತಿ ಬದುಕಿದ ! ಶವಾಗಾರದ ಫ್ರೀಜರ್‌ನಲ್ಲಿ 7 ಗಂಟೆಗಳ ಕಾಲ ಇದ್ದ ವ್ಯಕ್ತಿ

ಇನ್ನು ಪಶ್ಚಿಮ ಥಿಯೇಟರ್‌ ಕಮಾಂಡ್‌ನ‌ ಹೊಣೆಯನ್ನು ಸದ್ಯ ನೈಋತ್ಯ ಕಮಾಂಡ್‌ನ‌ ಹೊಣೆ ಹೊತ್ತಿರುವ ಲೆ.ಜ. ಅಮರ್‌ದೀಪ್‌ ಸಿಂಗ್‌ ಭಿಂಡರ್‌ ಅವರಿಗೆ ವಹಿಸಲಾಗಿದೆ. ರಕ್ಷಣಾತ್ಮಕವಾಗಿ ಅತ್ಯಂತ ಸೂಕ್ಷ್ಮ ಪ್ರದೇಶಗಳು ಎಂಬ ಕಾರಣಕ್ಕಾಗಿ ಜಮ್ಮು ಮತ್ತು ಕಾಶ್ಮೀರ, ಲಡಾಖ್‌ಗಳನ್ನು ಥಿಯೇಟರ್‌ ಕಮಾಂಡ್‌ ವ್ಯಾಪ್ತಿಯಿಂದ ಹೊರಗಿಡಲಾಗಿದೆ.

ಪಾಕಿಸ್ತಾನ ಮತ್ತು ಚೀನಾ ಭಾರತದ ವಿರುದ್ಧ ಸದಾ ಗುಟುರು ಹಾಕುತ್ತಿರುವ ಹಿನ್ನೆಲೆಯಲ್ಲಿ ಥಿಯೇಟರ್‌ ಕಮಾಂಡ್‌ ರಚನೆ ದೇಶಕ್ಕೆ ಅನಿವಾರ್ಯವಾಗಿದೆ. ಜತೆಗೆ ಚೀನಾ ಸೇನೆ, ಈಗಾಗಲೇ ಇಂಥ ಕ್ರಮಗಳನ್ನು ಕೈಗೊಂಡಿದೆ. ಜತೆಗೆ ಮಿತ್ರರಾಷ್ಟ್ರ ಪಾಕಿಸ್ತಾನಕ್ಕೆ ಥಿಯೇಟರ್‌ ಕಮಾಂಡ್‌ ರಚಿಸಲು ನೆರವು ನೀಡುತ್ತಿದೆ.

ಚೀನಾ ಜತೆಗೆ ಇರುವ 3,488 ಕಿಮೀ ದೂರದ ಗಡಿ ಪ್ರದೇಶದ ರಕ್ಷಣೆಯೇ ಭಾರತಕ್ಕೆ ಸವಾಲಾಗಿದೆ. ಚೀನಾ ಸೇನೆಯ ಪಶ್ಚಿಮ ಥಿಯೇಟರ್‌ ಕಮಾಂಡ್‌ ಭಾರತದ ಜತೆಗಿನ ಗಡಿಯ ಉಸ್ತುವಾರಿ ನೋಡಿಕೊಳ್ಳುತ್ತಿದೆ.

ಏನಿದು ಥಿಯೇಟರ್‌ ಕಮಾಂಡ್‌?
ಒಂದು ಥಿಯೇಟರ್‌ ಕಮಾಂಡ್‌ನ‌ಲ್ಲಿ ಭೂಸೇನೆ, ನೌಕಾಪಡೆ, ವಾಯುಪಡೆಯ ಯೋಧರು ಇರುತ್ತಾರೆ. ಇದೊಂದು ಏಕೀಕೃತ ಸೇನಾ ವ್ಯವಸ್ಥೆ. ಹೊಸ ವ್ಯವಸ್ಥೆಯಲ್ಲಿ ನಿಗದಿತ ಪ್ರದೇಶದ ಕಾರ್ಯನಿರ್ವಹಣೆ, ರಕ್ಷಣೆಯನ್ನು ಈ ಏಕೀಕೃತ ವ್ಯವಸ್ಥೆಯದ್ದೇ ಆಗಿರಲಿದೆ. ಇದರ ನೇತೃತ್ವವನ್ನು ಲೆಫ್ಟಿನೆಂಟ್‌ ಜನರಲ್‌ ಅಥವಾ ಕಮಾಂಡರ್‌ ರ್‍ಯಾಂಕ್‌ನ ಅಧಿಕಾರಿ ಹೊಂದಿರುತ್ತಾರೆ. ಮೂರು ಸೇನಾ ವಿಭಾಗಗಳಿಂದ ಆಯ್ದ ಅಧಿಕಾರಿಯನ್ನು ಇಲ್ಲಿಗೆ ಮುಖ್ಯಸ್ಥರನ್ನಾಗಿ ನೇಮಿಸಲಾಗುತ್ತದೆ.

 

Advertisement

Udayavani is now on Telegram. Click here to join our channel and stay updated with the latest news.

Next