ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಸುಧಾರಿತ ಸ್ಫೋಟಕ(ಐಇಡಿ)ವೊಂದು ಸ್ಫೋಟ ಗೊಂಡ ಪರಿಣಾಮ ಶುಕ್ರವಾರ ಸೇನೆಯ ಮೇಜರ್ ಹಾಗೂ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.
ನೌಶೆರಾ ವಲಯದ ಲಾಮ್ ಪ್ರದೇಶದಲ್ಲಿ ಯೋಧರು ಗಸ್ತು ತಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಗಡಿ ನಿಯಂತ್ರಣ ರೇಖೆಯ ಬಳಿ ಯೋಧರು ಗಸ್ತು ತಿರುಗುವ ಹಾದಿಯಲ್ಲೇ ಐಇಡಿಯನ್ನು ಹುದುಗಿಸಿಡಲಾಗಿತ್ತು.
ಯೋಧರು ಆ ಸ್ಥಳ ಪ್ರವೇಶಿಸುತ್ತಿದ್ದಂತೆ ಅದು ಸ್ಫೋಟಗೊಂಡಿದ್ದು, ಮೇಜರ್ ಹಾಗೂ ಯೋಧರೊಬ್ಬರು ಗಂಭೀರವಾಗಿ ಗಾಯಗೊಂಡರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದರು ಎಂದು ಪೊಲೀಸರು ತಿಳಿಸಿದ್ದಾರೆ. ಇದು ಉಗ್ರರ ಕೃತ್ಯ ಎಂದು ಶಂಕಿಸಲಾಗಿದೆ.
ಬಂಕರ್ ಮೇಲೆ ದಾಳಿ: ಜಮ್ಮು-ಕಾಶ್ಮೀರದ ಲಾಲ್ ಚೌಕ್‌ನಲ್ಲಿರುವ ಸಿಆರ್‌ಪಿಎಫ್ ಬಂಕರ್ ಮೇಲೆ ಉಗ್ರರು ದಾಳಿ ನಡೆಸಿದ ಪ್ರಕರಣವೂ ಶುಕ್ರವಾರ ನಡೆದಿದೆ. ಬಂಕರ್ ಮೇಲೆ ಉಗ್ರರು ಗ್ರೆನೇಡ್ ಎಸೆದಿದ್ದು, ಸಾವು ಸಂಭವಿಸಿಲ್ಲ.
ಪಾಕ್ ಗುಂಡಿನ ದಾಳಿ: ಈ ನಡುವೆ, ರಜೌರಿ ಮತ್ತು ಪೂಂಛ… ಜಿಲ್ಲೆಯಲ್ಲಿ ಪಾಕಿಸ್ತಾನ ಪಡೆ ಸತತ 4ನೇ ದಿನವೂ ಕದನ ವಿರಾಮ ಉಲ್ಲಂ ಸಿದೆ. ಪಾಕ್ ಸೈನಿಕರು ನಡೆಸಿದ ಗುಂಡಿನ ದಾಳಿಗೆ ಭಾರತೀಯ ಸೇನೆಯ ಪೋರ್ಟರ್ ಮೃತಪಟ್ಟಿದ್ದಾರೆ.