ಕೊಲ್ಲಂ(ಕೇರಳ): ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ ಐ) ಸಂಘಟನೆ ಭಾರತೀಯ ಸೇನಾಪಡೆಯ ಯೋಧರೊಬ್ಬರನ್ನು ಸೆರೆಹಿಡಿದು ಥಳಿಸಿರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:Cauvery issue; ಮೈಸೂರಿನಲ್ಲಿ ಜನತಾ ದರ್ಶನಕ್ಕೂ ತಟ್ಟಿದ ಕಾವೇರಿ ಹೋರಾಟದ ಬಿಸಿ!
ಸೆಪ್ಟೆಂಬರ್ 24ರಂದು ಈ ಘಟನೆ ನಡೆದಿದೆ. ಪಿಎಫ್ ಐನ ಆರು ಮಂದಿ ಯೋಧನನ್ನು ಸೆರೆಹಿಡಿದು ಮನೆ ಸಮೀಪದ ಕಾಡಿನೊಳಗೆ ಕರೆದೊಯ್ದು, ಕೈಯನ್ನು ಕಟ್ಟಿಹಾಕಿ ಬೆನ್ನಿನ ಮೇಲೆ ಪೆಯಿಂಟ್ ಬಳಸಿ ಪಿಎಫ್ ಐ ಎಂದು ಬರೆದು ಥಳಿಸಿರುವುದಾಗಿ ವರದಿ ವಿವರಿಸಿದೆ.
ವರದಿಯ ಪ್ರಕಾರ, ಘಟನೆಗೆ ಸಂಬಂಧಿಸಿದಂತೆ ಯೋಧ ಶೈನ್ ಕುಮಾರ್ ನೀಡಿರುವ ದೂರಿನ ಆಧಾರದ ಮೇಲೆ ಎಫ್ ಐಆರ್ ದಾಖಲಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆರು ಮಂದಿ ಕುಮಾರ್ ಅವರನ್ನು ಅಪಹರಿಸಿ ಕಡಕ್ಕಲ್ ಸಮೀಪದ ಕಾಡಿನೊಳಗೆ ಕರೆದೊಯ್ದು ಹಲ್ಲೆ ನಡೆಸಲಾಗಿದೆ. ಹಲ್ಲೆಗೆ ನಿಖರವಾದ ಕಾರಣ ಇನ್ನಷ್ಟೇ ತಿಳಿದುಬರಬೇಕಾಗಿದೆ ಎಂದು ವರದಿ ತಿಳಿಸಿದೆ.
ಯೋಧ ಕುಮಾರ್ ಬೆನ್ನಿನ ಮೇಲೆ ಹಸಿರು ಪೈಂಟ್ ನಿಂದ ಪಿಎಫ್ ಐ ಎಂದು ಬರೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯೋಧ ಕುಮಾರ್ ಅವರು ಹಾಕಿಕೊಂಡಿದ್ದ ಟಿ ಶರ್ಟ್ ಅನ್ನು ಹರಿದು ಪಿಎಫ್ ಐ ಎಂದು ಬರೆದಿರುವುದು ವಿಡಿಯೋದಲ್ಲಿದೆ.
ಘಟನೆಗೆ ಸಂಬಂಧಿಸಿದಂತೆ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪಿಎಫ್ ಐ ಸಂಘಟನೆಯನ್ನು ಭಾರತ ಸರ್ಕಾರ ನಿಷೇಧಿಸಿದೆ. ಇತ್ತೀಚೆಗೆ ನಿಷೇಧಿತ ಸಂಘಟನೆಯ ಕಚೇರಿ, ಮುಖಂಡರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ ಮತ್ತು ಎನ್ ಐಎ ಜಂಟಿಯಾಗಿ ದಾಳಿ ನಡೆಸಿತ್ತು.