ಶ್ರೀನಗರ: ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯ ಭಾರತ ಪಾಕ್ ಗಡಿ ಭಾಗದಲ್ಲಿ ನಡೆದ ಗುಂಡಿ ದಾಳಿಯಲ್ಲಿ ಓರ್ವ ಭಾರತೀಯ ಯೋಧ ಹುತಾತ್ಮರಾಗಿದ್ದಾರೆ. ಪಾಕ್ ಪಡೆಗಳು ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಇಂದು ಬೆಳಿಗ್ಗೆ ಪೂಂಚ್ ಮತ್ತು ರಜೌರಿ ಜಿಲ್ಲೆಗಳಲ್ಲಿ ಪಾಕಿಸ್ಥಾನ ಸೇನೆ ಹಲವು ಬಾರಿ ಕದನ ವಿರಾಮ ಉಲ್ಲಂಘಿಸಿದೆ. ಪೂಂಚ್ ಜಿಲ್ಲೆಯ ಕೃಷ್ಣ ಘಾಟಿಯಲ್ಲಿ ಇಂದು ಬೆಳಿಗ್ಗೆ 3.30ರ ಸುಮಾರಿಗೆ ಪಾಕಿಸ್ಥಾನ ಸೇನೆ ಕದನ ವಿರಾಮ ಉಲ್ಲಂಘಿಸಿದೆ ಎಂದು ಸೇನೆಯ ವಕ್ತಾರರು ಹೇಳಿದ್ದಾರೆ.
ಪಾಕಿಸ್ಥಾನದ ಸೇನೆಯು ಅಪ್ರಯೋಜಿತ ಗುಂಡಿನ ದಾಳಿ ನಡೆಸಲಾಗಿದೆ. ಭಾರತೀಯ ಸೇನೆಯೂ ಪ್ರತ್ಯುತ್ತರ ನೀಡಿದೆ ಎಂದು ವರದಿಯಾಗಿದೆ. ನಂತರ ರಜೌರಿಯ ನೌಶರಾದಲ್ಲಿ ಬೆಳಿಗ್ಗೆ 5.30ರ ಸುಮಾರಿಗೆ ಮತ್ತೆ ಕದನ ವಿರಾಮ ಉಲ್ಲಂಘಿಸಿದೆ ಎಂದಿದ್ದಾರೆ.
ಗಡಿ ನಿಯಂತ್ರಣ ರೇಖೆಯಲ್ಲಿ ಜೂನ್ 5ರ ಬಳಿಕ ನಡೆದ ಗುಂಡಿನ ದಾಳಿಯಲ್ಲಿ ನಾಲ್ಕನೇ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ.
ಈ ವರ್ಷದಲ್ಲಿ 1400 ನೇ ಬಾರಿ ಪಾಕಿಸ್ಥಾನ ಕದನ ವಿರಾಮ ಉಲ್ಲಂಘಿಸಿದೆ. 2019ರಲ್ಲಿ 3,168 ಬಾರಿ ಕದನ ವಿರಾಮ ಉಲ್ಲಂಘಿಸಿದ್ದ ಪಾಕಿಸ್ಥಾನ, 2018ರಲ್ಲಿ 1,629 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿತ್ತು.