ಜಮ್ಮು-ಕಾಶ್ಮೀರ:26/11 ರೀತಿ ಪಾಕ್ ಮೂಲದ ಜೈಶ್ ಉಗ್ರರು ದಾಳಿ ನಡೆಸಲು ವಿಫಲರಾದ ಬೆನ್ನಲ್ಲೇ ಶನಿವಾರ (ನವೆಂಬರ್ 21, 2020) ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್ ನ ಗಡಿ ನಿಯಂತ್ರಣ ರೇಖೆ (ಎಲ್ ಒಸಿ) ಬಳಿ ಪಾಕ್ ಸೇನೆ ಕದನ ವಿರಾಮ ಉಲ್ಲಂಘಿಸಿ ನಡೆಸಿದ ಗುಂಡಿನ ದಾಳಿಗೆ ಯೋಧನೊಬ್ಬ ಹುತಾತ್ಮನಾಗಿರುವ ಘಟನೆ ನಡೆದಿದೆ.
ಗುರುವಾರ ಜಮ್ಮು-ಕಾಶ್ಮೀರದ ನಗ್ರೋಟಾದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಜೈಶ್ ಎ ಮೊಹಮ್ಮದ್ ಸಂಘಟನೆಯ ನಾಲ್ವರು ಉಗ್ರರು ಹತ್ಯೆಗೀಡಾಗಿದ್ದರು. ಈ ಉಗ್ರರು 26/11 ರೀತಿ ದೊಡ್ಡ ದಾಳಿಗೆ ಸಂಚು ರೂಪಿಸಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿತ್ತು.
ಈ ಹಿನ್ನಲೆಯಲ್ಲಿ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿರುವ ಭಾರತ ದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿಗೆ ಸಮನ್ಸ್ ಜಾರಿಗೊಳಿಸಿದೆ. ಇತ್ತೀಚಿನ ದಿನಗಳಲ್ಲಿ ಗಡಿನಿಯಂತ್ರಣ ರೇಖೆ ಪ್ರದೇಶದಲ್ಲಿ ಪಾಕ್ ಸೇನೆ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸುತ್ತಿರುವುದು ಇದೇ ಮೊದಲ ಘಟನೆಯಲ್ಲ ಎಂದು ವರದಿ ವಿವರಿಸಿದೆ.
ಇದನ್ನೂ ಓದಿ:ಜೋ ಬೈಡೆನ್ ಪತ್ನಿ ಜಿಲ್ ಗೆ ಕರ್ನಾಟಕ ಮೂಲದ ಮಾಲಾ ಅಡಿಗ “ನೀತಿ ನಿರ್ದೇಶಕಿ”
ಬುಧವಾರ ಪಾಕಿಸ್ತಾನ ಸೇನೆ ಪೂಂಚ್ ಗಡಿ ಪ್ರದೇಶದಲ್ಲಿ ಎರಡು ಬಾರಿ ಕದನ ವಿರಾಮ ಉಲ್ಲಂಘಿಸಿ ಭಾರೀ ಪ್ರಮಾಣದಲ್ಲಿ ಗುಂಡಿನ ದಾಳಿ ಹಾಗೂ ಶೆಲ್ ದಾಳಿ ನಡೆಸಿತ್ತು.