Advertisement

“ಪ್ರವಾಹ ಪರಿಸ್ಥಿತಿ ಎದುರಿಸಲು ಸೇನಾ ತುಕಡಿ ನೆರವು’

11:17 PM Aug 07, 2019 | Lakshmi GovindaRaj |

ಬೆಳಗಾವಿ: ಬೆಳಗಾವಿ ಜಿಲ್ಲೆಯ ನದಿಗಳಿಗೆ ಬಂದಿರುವ ಪ್ರವಾಹ ಪರಿಸ್ಥಿತಿ ಎದುರಿಸಲು ಗುರುವಾರ ಮತ್ತೆ ನಾಲ್ಕು ಎನ್‌ಡಿಆರ್‌ಎಫ್‌ ಮತ್ತು ಎರಡು ಸೇನಾ ತುಕಡಿಗಳು ಆಗಮಿಸಲಿವೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

Advertisement

ಬೆಳಗಾವಿ ತಾಲೂಕಿನ ಸಾಂಬ್ರಾ ಬಳಿ ಬಳ್ಳಾರಿ ನಾಲಾದಿಂದ ಪ್ರವಾಹ ಸ್ಥಿತಿಗೆ ಒಳಗಾದ ಸ್ಥಳಗಳ ಪರಿಶೀಲನೆ ಹಾಗೂ ಸದ್ಯದ ಸ್ಥಿತಿಯ ಬಗ್ಗೆ ಬುಧವಾರ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 106 ಗ್ರಾಮಗಳು ಜಲಾವೃತಗೊಂಡಿದ್ದು, 22,682 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಇದುವರೆಗೆ ಮಳೆ ಹಾಗೂ ಪ್ರವಾಹದಿಂದ ಆರು ಜನ ಮೃತಪಟ್ಟಿದ್ದಾರೆ. ಅತಿವೃಷ್ಟಿ, ಅನಾವೃಷ್ಟಿಯಿಂದ ಮೃತರಾದವರಿಗೆ ತಕ್ಷಣವೇ ತಲಾ 5 ಲಕ್ಷ ರೂ. ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. “ಕಳೆದ 40- 50 ವರ್ಷಗಳಲ್ಲಿ ಇಂತಹ ಭಾರೀ ಪ್ರಮಾಣದ ಮಳೆಯನ್ನು ನಾನು ನೋಡಿಲ್ಲ. ಪ್ರವಾಹದಿಂದ ಜನರು ಸಂಕಷ್ಟಕ್ಕೀಡಾಗಿದ್ದಾರೆ.

ಪ್ರವಾಹಪೀಡಿತ ಗ್ರಾಮಸ್ಥರ ಸಂಕಷ್ಟಕ್ಕೆ ಸ್ಪಂದಿಸಲು ದೆಹಲಿಯಿಂದ ಬೆಂಗಳೂರಿಗೆ ಬಂದು ನೇರವಾಗಿ ಬೆಳಗಾವಿಗೆ ಆಗಮಿಸಿದ್ದೇನೆ. ಎರಡು ದಿನಗಳ ಕಾಲ ಬೆಳಗಾವಿ ಮತ್ತು ಬಾಗಲಕೋಟೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲಿಸಲಾಗುವುದು. ಅಗತ್ಯ ಬಿದ್ದರೆ ಮತ್ತೂಂದು ದಿನ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುತ್ತೇನೆ’ ಎಂದು ಅವರು ಹೇಳಿದರು.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನ, ಜಾನುವಾರುಗಳ ಸಂರಕ್ಷಣೆಗೆ ಎನ್‌ಡಿಆರ್‌ಎಫ್‌, ಅಗ್ನಿಶಾಮಕ ದಳ, ಪೊಲೀಸ್‌ ಇಲಾಖೆ ಸೇರಿದಂತೆ ಮತ್ತಿತರ ತಂಡಗಳು ಕಾರ್ಯಪ್ರವೃತ್ತವಾಗಿವೆ. ಇದಕ್ಕಾಗಿ ಕೇಂದ್ರ ಸರ್ಕಾರದ ನೆರವನ್ನು ಸಹ ಪಡೆಯಲಾಗುತ್ತಿದೆ. ಹೆಚ್ಚಿನ ರಕ್ಷಣಾ ತಂಡಗಳನ್ನು ಕಳುಹಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇದಲ್ಲದೆ ರಕ್ಷಣಾ ಕಾರ್ಯಕ್ಕೆ ಎರಡು ಹೆಲಿಕಾಪ್ಟರ್‌ಗಳನ್ನು ಕಾಯ್ದಿರಿಸಲಾಗಿದೆ ಎಂದರು.

Advertisement

50 ರೂ. ಲಕ್ಷ ಪರಿಹಾರ: ಕರ್ತವ್ಯದಲ್ಲಿದ್ದ ಸಮಯದಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಮೃತಪಟ್ಟಿರುವ ಕಿತ್ತೂರು ಪೊಲೀಸ್‌ ಇನ್ಸಪೆಕ್ಟರ್‌ ಈರಣ್ಣಾ ಲಠೆu ಅವರ ಕುಟುಂಬಕ್ಕೆ ನಮ್ಮ ಇಲಾಖೆ ವತಿಯಿಂದ 30 ಲಕ್ಷ ರೂ. ಮತ್ತು ವಿಪತ್ತು ಪರಿಹಾರ ನಿಧಿಯಿಂದ 20 ಲಕ್ಷ ಸೇರಿದಂತೆ ಒಟ್ಟು 50 ಲಕ್ಷ ರೂ. ಪರಿಹಾರ ನೀಡಲಾಗುವುದು. ಇದಲ್ಲದೆ ಅವರ ಕುಟುಂಬದ ಸದಸ್ಯರೊಬ್ಬರಿಗೆ ಉದ್ಯೋಗ ಕಲ್ಪಿಸಿಕೊಡಲಾಗುವದು ಎಂದು ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಪ್ರಕಟಿಸಿದರು.

ದಂಪತಿಗಳ ರಕ್ಷಣೆಗೆ ಕ್ರಮ: ಬೆಳಗಾವಿ ತಾಲೂಕಿನ ಕಬಲಾಪುರ ಗ್ರಾಮದ ಬಳಿ ಬಳ್ಳಾರಿ ನಾಲೆಯ ಪ್ರವಾಹದಲ್ಲಿ ವೃದ್ಧ ದಂಪತಿ ಸಿಕ್ಕಿಹಾಕಿಕೊಂಡಿರುವುದು ತಮ್ಮ ಗಮನಕ್ಕೆ ಬಂದಿದೆ. ಅವರನ್ನು ರಕ್ಷಿಸಲು ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ಅಧಿಕಾರಿಗಳು ಸಹ ಸತತವಾಗಿ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲಿ ಪ್ರವಾಹ ತೀವ್ರವಾಗಿರುವುದರಿಂದ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ. ಆದರೂ ನಾವು ಅವರನ್ನು ಸುರಕ್ಷಿತವಾಗಿ ಕರೆದುಕೊಂಡು ಬರಲು ಪ್ರಯತ್ನ ಮಾಡುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.

ಶೀಘ್ರದಲ್ಲೇ ರಾಜ್ಯ ಸಚಿವ ಸಂಪುಟವನ್ನು ರಚನೆ ಮಾಡಲಾಗುವುದು. ಈ ಸಂಬಂಧ ಕೇಂದ್ರ ಗೃಹ ಸಚಿವರ ಜೊತೆಗೆ ಮಾತುಕತೆ ಮಾಡಲಾಗಿದೆ. ಆ. 11ರಂದು ತಾವು ಮತ್ತೆ ದೆಹಲಿಗೆ ಸಚಿವರ ಪಟ್ಟಿಯೊಂದಿಗೆ ತೆರಳುವುದಾಗಿ ಅವರು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಉಮೇಶ ಕತ್ತಿ, ಅಭಯ ಪಾಟೀಲ, ಅನಿಲ ಬೆನಕೆ, ಮಹಾಂತೇಶ ದೊಡ್ಡಗೌಡರ ಉಪಸ್ಥಿತರಿದ್ದರು. ನಂತರ ಮುಖ್ಯಮಂತ್ರಿಗಳು ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ತೆರೆಯಲಾಗಿರುವ ಗಂಜಿ ಕೇಂದ್ರಕ್ಕೆ ಭೇಟಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next